ಉಕ್ರೇನ್: ಕೀವ್ ಸಮೀಪದ ಸಮಾಧಿಯಲ್ಲಿ ಹಲವು ನಾಗರಿಕರ ಮೃತದೇಹ ಪತ್ತೆ

photo: twitter
ಕೀವ್, ಎ.10: ನಾಲ್ಕು ವಾರಗಳಿಂದ ರಶ್ಯ ಸೇನೆಯ ವಶದಲ್ಲಿದ್ದ ಕೀವ್ ಸಮೀಪದ ಬುಝೋವಾ ನಗರದಲ್ಲಿ ಹಲವಾರು ನಾಗರಿಕರನ್ನು ಹೂತು ಹಾಕಿರುವ ಹೊಸ ಸಮಾಧಿ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಈ ನಗರದಿಂದ ರಶ್ಯ ತನ್ನ ಸೇನೆಯನ್ನು ವಾಪಾಸು ಕರೆಸಿಕೊಂಡಿದೆ. ಬುರೋವಾ ಹಾಗೂ ಸಮೀಪದ ಹಲವು ಪ್ರದೇಶಗಳಲ್ಲಿ ನಾಗರಿಕರನ್ನು ಸಮಾಧಿ ಮಾಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರೆ, ಇಲ್ಲಿನ ಪೆಟ್ರೋಲ್ ಬಂಕ್ನ ಬಳಿಯಿದ್ದ ಕಂದಕದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯಾಡಳಿತದ ಮುಖ್ಯಸ್ಥ ತರಾಸ್ ಡಿಡಿಚ್ ಹೇಳಿದ್ದಾರೆ.
ಜನಜೀವನ ಮತ್ತೆ ಸಹಜತೆಗೆ ಮರಳುತ್ತಿದೆ. ಆದರೆ ಆಕ್ರಮಣಕ್ಕೆ ಒಳಗಾಗಿದ್ದ ಸಂದರ್ಭ ಹಲವು ನಾಗರಿಕರು ಮೃತಪಟ್ಟಿದ್ದರು ಎಂದವರು ಹೇಳಿದ್ದಾರೆ. ಬುಝೋವಾದ ಬಳಿ ಸುಮಾರು 30 ಮೃತದೇಹಗಳು ಪತ್ತೆಯಾಗಿರುವುದಾಗಿ ಕಳೆದ ವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಉಕ್ರೇನ್ನ ರಾಜಧಾನಿ ಕೀವ್ ಮೇಲೆ ನಿಯಂತ್ರಣ ಸಾಧಿಸಲು ಸುಮಾರು 1 ತಿಂಗಳು ಸತತ ದಾಳಿ ನಡೆಸಿದ್ದ ರಶ್ಯ ಸೇನೆ, ರಾಜಧಾನಿಯ ಸುತ್ತಮುತ್ತಲಿನ ಮಕರಿವ್, ಬುಚಾ, ಇರ್ಪಿನ್ ಮತ್ತು ಡಿಮಿಟ್ರಿವ್ಕಾ ನಗರಗಳನ್ನು ವಶಕ್ಕೆ ಪಡೆದಿತ್ತು. ಮಾರ್ಚ್ ಅಂತ್ಯದಲ್ಲಿ ಟರ್ಕಿಯಲ್ಲಿ ನಡೆದ ಸಂಧಾನ ಮಾತುಕತೆಯ ಬಳಿಕ ಈ ನಗರಗಳಿಂದ ತನ್ನ ಸೇನೆಯನ್ನು ವಾಪಾಸು ಕರೆಸಿಕೊಂಡಿತ್ತು.
ಇದೀಗ ಈ ಪ್ರದೇಶಗಳಲ್ಲಿ ನಾಗರಿಕರ ಸಾಮೂಹಿಕ ಸಮಾಧಿ ಸ್ಥಳ ಪತ್ತೆಯಾಗಿರುವ ಹಿನ್ನಲೆಯಲ್ಲಿ ರಶ್ಯದ ವಿರುದ್ಧ ಅಂತರಾಷ್ಟ್ರೀಯ ಸಮುದಾಯ ತೀವ್ರ ಆಕ್ರೋಶ ಮತ್ತು ಖಂಡನೆ ವ್ಯಕ್ತಪಡಿಸಿದೆ.







