ಬಿಸಿಲಿನ ಝಳ: ಕಾದ ಕೆಂಡವಾದ ದಿಲ್ಲಿ; 72 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು
ಹೊಸದಿಲ್ಲಿ, ಎ.10: ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ತಾಪಮಾನವು 42.4 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಕಳೆದ 72 ವರ್ಷಗಳಲ್ಲೇ ಏಪ್ರಿಲ್ ತಿಂಗಳ ಮೊದಲಾರ್ಧದಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ.
1941ರ ಎಪ್ರಿಲ್ 29ರಂದು ದಿಲ್ಲಿಯಲ್ಲಿ ತಾಪಮಾನವು 45.6 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ಈವರೆಗಿನ ಗರಿಷ್ಠ ತಾಪಮಾನವೆನಿಸಿತ್ತು. ದಿಲ್ಲಿಯ ಸಮೀಪದ ಗುರುಗ್ರಾಮದಲ್ಲಿ ರವಿವಾರ ಬಿಸಿಲಿನ ಝಳ ವಿಪರೀತವಾಗಿದ್ದು ಅಲ್ಲಿ 44.5 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 10 ಡಿಗ್ರಿಗಳಷ್ಟು ಅಧಿಕವಾಗಿದೆ.
ತಾಪಮಾನದಲ್ಲಿ ಉಂಟಾಗಿರುವ ಭಾರೀ ಏರಿಕೆಯಿಂದಾಗಿ ದಿಲ್ಲಿಯ ಕೆಲವು ಭಾಗಗಳಲ್ಲಿ ತೀವ್ರವಾದ ಉಷ್ಣಮಾರುತವು ಉಂಟಾಗುವ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಆರೆಂಜ್ ಆಲರ್ಟ್ ಜಾರಿಗೊಳಿಸಿದೆ. ರಾಜಧಾನಿ ಹೊಸದಿಲ್ಲಿಯಲ್ಲಿ ಗರಿಷ್ಠ ತಾಪಮಾನವು 42 ಡಿಗ್ರಿ ಸೆಲ್ಸಿಯಸ್ ಗೆ ತಲುಪುವ ಸಾಧ್ಯತೆಯಿದೆಯೆಂದು ಅದು ಮುನ್ಸೂಚನೆ ನೀಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ರಾಜಧಾನಿ ದಿಲ್ಲಿಯು ತೀವ್ರವಾದ ಉಷ್ಣಮಾರುತದ ಪ್ರಕೋಪವನ್ನು ಎದುರಿಸುತ್ತಿದೆ.