ಹಿಂದಿ ಹೇರಿಕೆಯ ವಿರುದ್ಧ ಮತ್ತೊಮ್ಮೆ ಚಳವಳಿ ನಡೆಯುವುದಕ್ಕೆ ಆಸ್ಪದ ನೀಡದಿರಿ: ಕೇಂದ್ರಕ್ಕೆ ಡಿಎಂಕೆ ಎಚ್ಚರಿಕೆ

ಚೆನ್ನೈ, ಎ.10: ಹಿಂದಿ ಹೇರಿಕೆಯ ಯಾವುದೇ ಪ್ರಯತ್ನದ ವಿರುದ್ಧ ಕೇಂದ್ರ ಸರಕಾರಕ್ಕೆ ರವಿವಾರ ಆಡಳಿತಾರೂಢ ಡಿಎಂಕೆ ಪಕ್ಷವು ಬಲವಾದ ಎಚ್ಚರಿಕೆಯನ್ನು ನೀಡಿದೆ., ಪಕ್ಷದ ದಿವಂಗತ ನಾಯಕ ಎಂ.ಕರುಣಾನಿಧಿ ಅವರು ನಡೆಸಿದ್ದ ತಮಿಳು ವಿರೋಧಿ ಆಂದೋಲನವನ್ನು ತಮಿಳರು ಈಗಲೂ ಸ್ಮರಿಸಿಕೊಳ್ಳುತ್ತಿದ್ದು, ಅದು ಮತ್ತೊಮ್ಮೆ ನಡೆಯುವುದಕ್ಕೆ ಅವಕಾಶ ನೀಡದಂತೆ ಅದು ಹೇಳಿದೆ.
ಡಿಎಂಕೆಯ ಮುಖವಾಣಿ ‘ಮುರಸೋಳಿ’ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಜನರ ಮೇಲೆ ಹಿಂದಿ ಹೇರಿಕೆಯ ವಿರುದ್ಧ ದಿವಂಗತ ಕರುಣಾನಿಧಿಯವರ ಜನಪ್ರಿಯ ಘೋಷಣೆ ಹಾಗೂ ‘ಕೇಂದ್ರ ಸರಕಾರಕ್ಕೆ ಎಚ್ಚರಿಕೆ’ ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಲಾಗಿದೆ.
ಕರುಣಾನಿಧಿಯವರು 1938ರಲ್ಲಿ 14ನೇ ವಯಸ್ಸಿನವರಾಗಿದ್ದಾಗ ತನ್ನ ಹುಟ್ಟೂರಾದ ತಿರುವರೂರ್ನ ರಸ್ತೆಗಳಲ್ಲಿ ಇತರ ವಿದ್ಯಾರ್ಥಿಗಳ ಜೊತೆಗೂಡಿ ಹಿಂದಿ ಭಾಷೆ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸಿರುವುದನ್ನು ಮುರಸೋಳಿ ಪತ್ರಿಕೆಯು ನೆನಪಿಸಿದೆ.
ಕರುಣಾನಿಧಿಯವರ ಆ ರ್ಯಾಲಿಯನ್ನು ತಮಿಳುನಾಡಿನ ಜನತೆ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ತಮಿಳುನಾಡಿನ ಜನತೆ ಹಿಂದಿ ಹೇರಿಕೆಯನ್ನು ಜಾರಿಗೊಳಿಸಲು ಯಾವತ್ತೂ ಆಸ್ಪದ ನೀಡಲಾರರು ಎಂದು ಲೇಖನ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಯಾವುದೇ ಹೇಡಿಗಳಿಲ್ಲ ಹಾಗೂ ಅವರ ಮೇಲೆ ಹಿಂದಿಯನ್ನು ಹೇರುವುದು ಸಾಧ್ಯವಿಲ್ಲವೆಂದು ಪತ್ರಿಕೆಯ ಲೇಖನ ಹೇಳಿದೆ.
ಇಂಗ್ಲೀಷ್ನ ಪರ್ಯಾಯ ಭಾಷೆಯಾಗಿ ಹಿಂದಿ ಭಾಷೆಯನ್ನು ಅಂಗೀಕರಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 7ರಂದು ಹೊಸದಿಲ್ಲಿಯಲ್ಲಿ ನಡೆದ 37ನೇ ಅಧಿಕೃತ ಭಾಷಾ ಸಮಿತಿಯ ಸಭೆಯಲ್ಲಿ ಹೇಳಿದ್ದರು.







