ಲಕ್ನೊ ವಿರುದ್ಧ ರಾಜಸ್ಥಾನಕ್ಕೆ ರೋಚಕ ಜಯ
ಐಪಿಎಲ್: ಹೆಟ್ಮೆಯರ್ ಅಬ್ಬರದ ಬ್ಯಾಟಿಂಗ್, ಯಜುವೇಂದ್ರಗೆ ನಾಲ್ಕು ವಿಕೆಟ್
Photo:twitter
ಮುಂಬೈ, ಎ.10: ಸ್ಪಿನ್ನರ್ ಯಜುವೇಂದ್ರ ಚಹಾಲ್ ಉತ್ತಮ ಬೌಲಿಂಗ್(4-41) ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ರೋಚಕವಾಗಿ ಸಾಗಿದ ಐಪಿಎಲ್ನ 20ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 3 ರನ್ಗಳ ಅಂತರದಿಂದ ಮಣಿಸಿತು.
ರವಿವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 166 ರನ್ ಗುರಿ ಪಡೆದ ಲಕ್ನೊ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಲಕ್ನೊ ತಂಡವು ಸೋಲಿನ ಸುಳಿಯಲ್ಲಿದ್ದಾಗ ಅಬ್ಬರದ ಬ್ಯಾಟಿಂಗ್ ಮಾಡಿದ ಸ್ಟೋನಿಸ್(38 ರನ್, 17 ಎಸೆತ, 2 ಬೌಂಡರಿ, 4 ಸಿಕ್ಸರ್) ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ ಕೊನೆಯ ಓವರ್ನಲ್ಲಿ ಬಿಗಿ ಬೌಲಿಂಗ್ ಮಾಡಿದ ಕುಲದೀಪ್ ಸೇನ್ ರಾಜಸ್ಥಾನಕ್ಕೆ ರೋಚಕ ಗೆಲುವು ತಂದರು.
ಅಗ್ರ ಕ್ರಮಾಂಕದಲ್ಲಿ ನಾಯಕ ಕೆ.ಎಲ್.ರಾಹುಲ್ ಹಾಗೂ ಕೆ.ಗೌತಮ್ ರನ್ ಖಾತೆ ತೆರೆಯಲು ವಿಫಲರಾದರು. ಜೇಸನ್ ಹೋಲ್ಡರ್ 8 ರನ್ ಹಾಗೂ ಆಯುಷ್ ಬದೋನಿ 5 ರನ್ ಗಳಿಸಿದರು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(39 ರನ್, 32 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು. ದೀಪಕ್ ಹೂಡ(25 ರನ್), ಕೃನಾಲ್ ಪಾಂಡ್ಯ(22 ರನ್) ಹಾಗೂ ದುಷ್ಮಂತ್ ಚಾಮೀರ(13)ಎರಡಂಕೆಯ ಸ್ಕೋರ್ ಗಳಿಸಿದರು.
ರಾಜಸ್ಥಾನದ ಪರ ಯಜುವೇಂದ್ರ ಚಹಾಲ್(4-41)ಯಶಸ್ವಿ ಬೌಲರ್ ಎನಿಸಿಕೊಂಡರು. ಟ್ರೆಂಟ್ ಬೌಲ್ಟ್(2-30)ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ ಶಿಮ್ರಾನ್ ಹೆಟ್ಮೆಯರ್ ಬಿರುಸಿನ ಅರ್ಧಶತಕದ(ಔಟಾಗದೆ 59 ರನ್, 36 ಎಸೆತ, 1 ಬೌಂಡರಿ, 6 ಸಿಕ್ಸರ್ ) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 165 ರನ್ ಗಳಿಸಿತು.
ಮೊದಲ 10 ಓವರ್ಗಳಲ್ಲಿ ಜೋಸ್ ಬಟ್ಲರ್(13 ರನ್), ಸಂಜು ಸ್ಯಾಮ್ಸನ್(13 ರನ್), ದೇವದತ್ತ ಪಡಿಕ್ಕಲ್ (29)ಹಾಗೂ ರಾಸ್ ವಾನ್ಡರ್ ಡುಸ್ಸಾನ್ (4)ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಹೆಟ್ಮೆಯರ್ ಹಾಗೂ ಆರ್.ಅಶ್ವಿನ್(28 ರನ್, 23 ಎಸೆತ)5ನೇ ವಿಕೆಟ್ಗೆ 68 ರನ್ ಜೊತೆಯಾಟ ನಡೆಸಿದರು.
ಇನಿಂಗ್ಸ್ ಆರಂಭಿಸಿದ ಬಟ್ಲರ್ ಹಾಗೂ ಪಡಿಕ್ಕಲ್ ಮೊದಲ ವಿಕೆಟ್ಗೆ 42 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಲಕ್ನೊದ ಪರ ಕೆ.ಗೌತಮ್(2-30) ಹಾಗೂ ಜೇಸನ್ ಹೋಲ್ಡರ್(2-50) ತಲಾ 2 ವಿಕೆಟ್ಗಳನ್ನು ಪಡೆದರು.