ಸಿಪಿಎಂ ಮಹಾಕಾರ್ಯದರ್ಶಿಯಾಗಿ ಸೀತಾರಾಮ್ ಯೆಚೂರಿ ಪುನರಾಯ್ಕೆ

ಹೊಸದಿಲ್ಲಿ, ಎ.10: ಸಿಪಿಎಂ ಪಕ್ಷದ ಮಹಾ ಕಾರ್ಯದರ್ಶಿಯಾಗಿ ಸೀತಾರಾಮ್ ಯಚೂರಿ ಪುನರಾಯ್ಕೆಗೊಂಡಿದ್ದಾರೆ. ಕಣ್ಣೂರಿನಲ್ಲಿ ಸಿಪಿಎಂ ಪಕ್ಷದ 23ನೇ ರಾಷ್ಟ್ರೀಯ ಸಮಾವೇಶದಲ್ಲಿ ಯಚೂರಿ ಅವರನ್ನು ಮಹಾ ಕಾರ್ಯದರ್ಶಿ ಹುದ್ದೆಗೆ ಸತತ ಮೂರನೆ ಬಾರಿಗೆ ನೇಮಿಸಲಾಗಿದೆ.
ಮಹಾಕಾರ್ಯದರ್ಶಿಯಾಗಿ ಪುನರಾಯ್ಕೆಗೊಂಡ ಬಳಿಕ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಯಚೂರಿ ಅವರು, ಫ್ಯಾಶಿಸ್ಟ್ ಆರೆಸ್ಸೆಸ್ನ ಕೋಮುವಾದಿ ಹಿಂದುತ್ವ ಕಾರ್ಯಸೂಚಿಯನ್ನು ಅನುಸರಿಸುತ್ತಿರುವ ಬಿಜೆಪಿಯನ್ನು ಏಕಾಂಗಿಯಾಗಿಸುವುದು ಹಾಗೂ ಪರಾಭವಗೊಳಿಸುವುದೇ ಪಕ್ಷದ ಪ್ರಮುಖ ಕೆಲಸವಾಗಿದೆ ಎಂದರು..
ಬಿಜೆಪಿಯನ್ನು ದೂರವಿಡುವುದು ಹಾಗೂ ಪರಾಭವಗೊಳಿಸುವುದು ಮಾನವ ವಿಮೋಚನೆಯೆತ್ತ ನಮ್ಮ ಮುನ್ನಡೆ ಯಾತ್ರೆಗೆ ಅಗತ್ಯ ಮಾತ್ರವಲ್ಲ, ಜಾತ್ಯತೀತ ಪ್ರಜಾತಾಂತ್ರಿಕ ಗಣರಾಜ್ಯವಾಗಿ ಭಾರತದ ಸಂರಕ್ಷಣೆಗೂ ಅವಶ್ಯಕವಾಗಿದೆ ಎಂದರು. ಸಿಪಿಎಂನ ಪಾಲಿಟ್ಬ್ಯುರೋದ 17 ಸದಸ್ಯರು ಹಾಗೂ 85 ಮಂದಿ ಕೇಂದ್ರೀಯ ಸಮಿತಿಯ ಸದಸ್ಯರನ್ನು ಕೂಡಾ ಸಮಾವೇಶದಲ್ಲಿ ಆಯ್ಕೆ ಮಾಡಲಾಯಿತು.
ಪಶ್ಚಿಮ ಬಂಗಾಳದ ಹಿರಿಯ ನಾಯಕ ರಾಮಚಂದ್ರ ಡೋಮೆ ಅವರನ್ನು ಕೇಂದ್ರೀಯ ಸಮಿತಿಯಿಂದ ಪಾಲಿಟ್ ಬ್ಯೂರೋಗೆ ಭಡ್ತಿ ನೀಡಲಾಗಿದೆ ಹಾಗೂ ದಲಿತರಿಗೆ ಪಾಲಿಟ್ಬ್ಯೂರೋದಲ್ಲಿ ಪ್ರಾತಿನಿಧ್ಯ ದೊರೆತಿರುವುದು ಇದೇ ಮೊದಲ ಸಲವಾಗಿದೆ.
ಕೇರಳದ ಎಡರಂಗದ ಸಂಚಾಲಕ ಎ. ವಿಜಯರಾಘವನ್ ಹಾಗೂ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧಾವಲೆ ಕೂಡಾ ಸಿಪಿಎಂ ಪಾಲಿಟ್ ಬ್ಯೂರೋಗೆ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಹಿರಿಯ ನಾಯಕರಾದ ಎಸ್.ರಾಮಚಂದ್ರನ್ ಪಿಳ್ಳೈ, ಬಿಮನ್ ಬೋಸ್ ಹಾಗೂ ಹನ್ನಾನ್ ಮೊಲ್ಲಾ ಅವರಿಗೆ 75 ವರ್ಷ ದಾಟಿರುವುದರಿಂದ, ಅವರನ್ನು ಪಾಲಿಟ್ ಬ್ಯೂರೋದಿಂದ ಕೈಬಿಡಲಾಗಿದೆ. ಆದಾಗ್ಯೂ ಅವರನ್ನು ಕೇಂದ್ರೀಯ ಸಮಿತಿಯ ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.
85 ಸದಸ್ಯ ಬಲದ ಸಿಪಿಎಂ ಪಾಲಿಟ್ಬ್ಯುರೋದಲ್ಲಿ 17 ಮಂದಿ ಹೊಸಬರು ಮತ್ತು ಒಟ್ಟು 17 ಮಂದಿ ಮಹಿಳೆಯರಿದ್ದಾರೆ. ಐದು ದಿನಗಳ ಸಿಪಿಎಂ ರಾಷ್ಟ್ರೀಯ ಸಮಾವೇಶವು ರವಿವಾರ ಕಣ್ಣೂರಿನಲ್ಲಿ ಬೃಹತ್ ರ್ಯಾಲಿಯೊಂದಿಗೆ ಸಮಾಪನಗೊಂಡಿತು.







