ಪೆಲೆಸ್ತೀನ್ ಮಹಿಳೆಯ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್ ಸೈನ್ಯ

photo:twitter
ಬೆಥ್ಲಹೇಮ್, ಎ.10: ಆಕ್ರಮಿತ ಪಶ್ಚಿಮ ದಂಡೆಯ ಬೆಥ್ಲಹೇಮ್ ನಗರದಲ್ಲಿ ಪೆಲೆಸ್ತೀನ್ ಮಹಿಳೆಯೊಬ್ಬರನ್ನು ಇಸ್ರೇಲ್ ಪಡೆ ಗುಂಡಿಕ್ಕಿ ಹತ್ಯೆಗೈದಿದೆ ಎಂದು ಪೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ.ಮೃತ ಮಹಿಳೆಯನ್ನು ಘಡಾ ಇಬ್ರಾಹಿಂ ಸಬಾಟಿಯನ್ ಎಂದು ಗುರುತಿಸಲಾಗಿದೆ. ವಿಧವೆಯಾಗಿರುವ ಇವರಿಗೆ 6 ಮಕ್ಕಳಿದ್ದಾರೆ. ಇಸ್ರೇಲ್ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಅವರು ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಇಲಾಖೆ ಹೇಳಿದೆ.
ದಕ್ಷಿಣ ಪ್ರಾಂತದ ಹುಸಾನ್ ನಗರದಲ್ಲಿ ಸೇನೆ ಎಚ್ಚರಿಕೆಯ ಗುಂಡು ಹಾರಿಸಿದರೂ ಓರ್ವ ಶಂಕಿತ ಮಹಿಳೆ ಯೋಧರತ್ತ ಮುನ್ನುಗ್ಗಿದಾಗ ಆಕೆಯ ದೇಹದ ಕೆಳಭಾಗದತ್ತ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ. ಇದಕ್ಕೂ ಮುನ್ನ ಪಶ್ಚಿಮ ದಂಡೆಯ ಜೆನಿನ್ ಜಿಲ್ಲೆಯಲ್ಲಿ ಸತತ 2ನೇ ದಿನ ಇಸ್ರೇಲ್ ಯೋಧರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದು ಈ ಸಂದರ್ಭ ಸ್ಥಳೀಯರೊಂದಿಗಿನ ಘರ್ಷಣೆಯಲ್ಲಿ ಕನಿಷ್ಟ 10 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





