ಕೊರೋನ ಬಿಕ್ಕಟ್ಟು ಇನ್ನೂ ಕೊನೆಗೊಂಡಿಲ್ಲ: ಪ್ರಧಾನಿ ಮೋದಿ

ಅಹ್ಮದಾಬಾದ್, ಎ.10: ಕೊರೋನ ವೈರಸ್ ಸಾಂಕ್ರಾಮಿಕವು ಇನ್ನೂ ತೊಲಗಿಹೋಗಿಲ್ಲ ಹಾಗೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇದೆಯೆಂದು ರವಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು,, ಈ ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ಕೈಬಿಡದಂತೆ ಜನತೆಗೆ ಕರೆ ನೀಡಿದ್ದಾರೆ. ಬಹುರೂಪಿಯಾದ ಕೋವಿಡ್19 ಯಾವಾಗ ಕಾಣಿಸಿಕೊಳ್ಳುತ್ತದೆಯೆಂದು ಯಾರಿಗೂ ತಿಳಿದಿಲ್ಲ. ಜನತೆಯ ಬೆಂಬಲದೊಂದಿಗೆ 185 ಕೋಟಿ ಲಸಿಕೆಗಳ ಡೋಸ್ ನೀಡುವ ಮೂಲಕ ಕೋವಿಡ್ನ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತೆಂದು ಅವರು ಹೇಳಿದ್ದಾರೆ.
ಗುಜರಾತ್ನ ಜುನಾಗಢ ಜಿಲ್ಲೆಯ ವಂಧಾಲಿಯಲ್ಲಿ ‘ಮಾ ಉಮಿಯಾ ಧಾಮ್’ ದೇವಾಲಯದ 14ನೇ ಪ್ರತಿಷ್ಠಾಪನಾ ದಿನಾಚರಣೆಯ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಭಾಷಣ ಮಾಡುತ್ತಿದ್ದರು. ರಾಸಾಯನಿಕ ಗೊಬ್ಬರಗಳ ಹಾನಿಯಿಂದ ಭೂಮಿತಾಯಿಯನ್ನು ರಕ್ಷಿಸಲು ನೈಸರ್ಗಿಕ ಕೃಷಿಯತ್ತ ಹೊರಳುವಂತೆಯೂ ಅವರು ಕಡುವಾ ಪಾಟಿದಾರ್ ಸಮುದಾಯದ ಕುಲದೇವಿಯಾದ ಮಾ ಉಮಿಯಾ ದೇವಿಯ ಭಕ್ತರಿಗೆ ಕರೆ ನೀಡಿದರು.
ಆಝಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ 75 ಅಮೃತ ಸರೋವರಗಳನ್ನು ನಿರ್ಮಿಸಲು ಜನತೆ ಪ್ರತಿಜ್ಞೆ ಸ್ವೀಕರಿಸಬೇಕೆಂದು ಪ್ರಧಾನಿ ಕರೆ ನೀಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ರಕ್ತಹೀನತೆಯಿಂದ ಬಳತ್ತಿರುವ ತಾಯಂದಿರ ಪಾಲನೆಗಾಗಿ ಜಾತಿಮತ ಭೇದವಿಲ್ಲದೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆಯೂ ಪ್ರಧಾನಿಯವರು ಮಾ ಉಮಿಯಾ ಭಕ್ತರಿಗೆ ಕರೆ ನೀಡಿದರು.