ಅಮೆರಿಕದಿಂದ ಪ್ರೆಡೇಟರ್ ಡ್ರೋಣ್ ಗಳ ಖರೀದಿ ಕಡಿತದ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ
ಹೊಸದಿಲ್ಲಿ, ಎ.10: ರಕ್ಷಣಾ ಕ್ಷೇತ್ರದಲ್ಲಿ ‘ಮೇಕ್ ಇನ್ ಇಂಡಿಯಾ’ ನೀತಿಗೆ ಬಲವಾದ ಉತ್ತೇಜನ ನೀಡುವ ಮೋದಿ ಸರಕಾರದ ನೀತಿಗೆ ಅನುಗುಣವಾಗಿ ರಕ್ಷಣಾ ಸಚಿವಾಲಯವು ಅಮೆರಿಕದಿಂದ ಖರೀದಿಸುವ ಪ್ರೆಡೇಟರ್ ಡ್ರೋಣ್ಗಳ ಸಂಖ್ಯೆಯನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸೇನೆಯ ಲೆಫ್ಟಿನೆಂಟ್ ಜನರಲ್ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ.
ಭಾರತವು ಈ ಮೊದಲು ಅತಿ ಎತ್ತರದಿಂದ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿರುವ 30 ಪ್ರೆಡೇಟರ್ ಡ್ರೋಣ್ಗಳನ್ನು ಅಮೆರಿಕದಿಂದ ಖರೀದಿಸುವ ಯೋಜನೆಯನ್ನು ಹೊಂದಿತ್ತು. ಈ ಡ್ರೋಣ್ಗಳನ್ನು ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಗೆ ಸಮಾನವಾಗಿ ವಿತರಿಸುವ ಇಂಗಿತವನ್ನು ಕೂಡಾ ಹೊಂದಿತ್ತು.
ಕಣ್ಗಾವಲು ನಡೆಸಲು ಹಾಗೂ ಅನತಿ ದೂರದಿಂದ ಶತ್ರುವಿನ ಗುರಿಗಳ ಮೇಲೆ ಕ್ಷಿಪಣಿ ಮತ್ತಿತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುವ ಸಾಮರ್ಥ್ಯವನ್ನು ಈ ಡ್ರೋನ್ಗಳು ಹೊಂದಿವೆ ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.
‘‘ಪ್ರೆಡೇಟರ್ ಡ್ರೋಣ್ಗಳಿಗೆ ಸರಿಸಮಾನವಾದ ಸ್ವದೇಶಿ ಉಪಕರಣಗಳನ್ನು ಅಭಿವೃದ್ಧಿಪಡಿಸು ಸಮಯದವರೆಗೆ ಅಮೆರಿಕದಿಂದ ಖರೀದಿಸಲಾಗುವ ಪ್ರೆಡೇಟರ್ ಡ್ರೋಣ್ಗಳ ಸಂಖ್ಯೆಗಳನ್ನು ಕಡಿತಗೊಳಿಸುವ ಬಗ್ಗೆ ನಿರ್ಧರಿಸಲು ಸಂಯೋಜಿತ ರಕ್ಷಣಾ ಸಿಬ್ಬಂದಿ ಮುಖ್ಯ ಕಾರ್ಯಾಲಯದ ಲೆಪ್ಟಿನೆಂಟ್ ಜನರಲ್ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಒಲವು ವ್ಯಕ್ತಪಡಿಸಿ ಪ್ರಧಾನಿ ಸಚಿವಾಲಯವು ನೀಡಿದ ನಿರ್ದೇಶಕ್ಕೆ ಅನುಸಾರವಾಗಿ ಆಮದು ಮಾರ್ಗದ ಮೂಲಕ ನಡೆಸಲಾಗುವ ಎಲ್ಲಾ ರಕ್ಷಣಾ ಒಪ್ಪಂದಗಳನ್ನು ರದ್ದುಪಡಿಸಲಾಗಿದೆ ಇಲ್ಲವೇ ಸ್ಥಗಿತಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತವು ಪ್ರಸಕ್ತ ಎರಡು ಪ್ರೆಡೇಟರ್ ಡ್ರೋಣ್ಗಳನ್ನು ಅಮೆರಿಕದ ಕಂಪೆನಿಯೊಂದರಿಂದ ಭೋಗ್ಯ (ಲೀಸ್)ಕ್ಕೆ ಪಡೆದುಕಂಡಿದೆ. ಅವು ಭಾರತೀಯ ನೌಕಾಪಡೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಚಟುವಟಿಕೆಗಳ ಬಗ್ಗೆ ನಿಗಾವಿರಿಸಲು ನೆರವಾಗುತ್ತಿವೆ.







