ಕೋವಿಡ್ ಬೂಸ್ಟರ್ ಡೋಸ್ಗೆ ನೀರಸ ಸ್ಪಂದನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್-19 ಸೋಂಕು ವಿರುದ್ಧದ ಬೂಸ್ಟರ್ ಡೋಸ್ ದೇಶದಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಮೊದಲ ದಿನ ನೀರಸ ಸ್ಪಂದನೆ ಕಂಡುಬಂದಿದೆ.
ಮೊದಲ ದಿನ ದೇಶಾದ್ಯಂತ ಕೇವಲ 9,496 ಮಂದಿ ಲಸಿಕೆ ಪಡೆದಿದ್ದು, 850 ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಿವೆ ಎಂದು ಕೋವಿನ್ ಡ್ಯಾಶ್ ಬೋರ್ಡ್ ಅಂಕಿ ಅಂಶಗಳು ಹೇಳುತ್ತವೆ.
18 ವರ್ಷ ಮೇಲ್ಪಟ್ಟ ಹಾಗೂ ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡ ಎಲ್ಲರೂ ಬೂಸ್ಟರ್ ಡೋಸ್ ಪಡೆಯಲು ಅರ್ಹರು. ಮೊದಲು ಪಡೆದ ಲಸಿಕೆ ಡೋಸ್ಗಳನ್ನೇ ಖಾಸಗಿ ಆಸ್ಪತ್ರೆಗಳಲ್ಲಿ ಜನ ಪಡೆಯಬಹುದಾಗಿದೆ. ಬಹುತೇಕ ಆಸ್ಪತ್ರೆಗಳು ಸೋಮವಾರದಿಂದ ಬೂಸ್ಟರ್ ಡೋಸ್ ಆರಂಭಿಸಲು ಚಿಂತನೆ ನಡೆಸಿವೆ.
ಭಾರತದಾದ್ಯಂತ ಶೇಕಡ 82.9ರಷ್ಟು ಮಂದಿ ಎರಡೂ ಡೋಸ್ ಪಡೆದಿದ್ದು, ಶೇಕಡ 95.7ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಎಸ್ಐಐ ಹಾಗೂ ಭಾರತ್ ಬಯೋಟೆಕ್, ಕ್ರಮವಾಗಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ದರವನ್ನು ರೂ. 225ಕ್ಕೆ ಇಳಿಸಿದ್ದವು.
ಖಾಸಗಿ ಆಸ್ಪತ್ರೆಗಳು ಈಗಾಗಲೇ ಹಿಂದಿನ ದುಬಾರಿ ದರಕ್ಕೆ ಲಸಿಕೆಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ, ಪರಿಷ್ಕೃತ ದರದಲ್ಲೇ ಲಸಿಕೆ ನೀಡುವಂತೆ ಲಸಿಕೆ ಉತ್ಪಾದನಾ ಕಂಪನಿಗಳು ಕೇಳಿಕೊಂಡಿವೆ. ಹಾಗೂ ಬೆಲೆ ವ್ಯತ್ಯಾಸವನ್ನು ಆಸ್ಪತ್ರೆಗಳಿಗೆ ಭರಿಸಲಾಗುವುದು ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.
ಲಸಿಕಾ ಕಂಪನಿಗಳು ನಿಗದಿಪಡಿಸಿದ ಬೆಲೆಯ ಜತೆಗೆ ರೂ. 150ನ್ನು ಸೇವಾ ಶುಲ್ಕವಾಗಿ ಖಾಸಗಿ ಆಸ್ಪತ್ರೆಗಳು ಪಡೆಯಲು ಅವಕಾಶವಿದೆ. ಈ ಮುನ್ನ ಕೋವಿಶೀಲ್ಡ್ ದರ ರೂ. 600 ಹಾಗೂ ಕೊವ್ಯಾಕ್ಸಿನ್ ದರ ರೂ. 1200 ಆಗಿತ್ತು.