ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯವಕರಿಗೆ ಹಲ್ಲೆ ನಡೆಸಿ ಭಯಭೀತಿ ಸೃಷ್ಟಿಸಿದ ರೌಡಿಶೀಟರ್‌ಗಳ ಸೆರೆ

ಮಂಗಳೂರು, ಎ.11: ನಗರದ ವೆಲೆನ್ಸಿಯಾದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಲವರಿಗೆ ಹಲ್ಲೆ ನಡೆಸಿ ಭಯಭೀತಿ ಸೃಷ್ಟಿಸಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಜಾಲ್ ಜಲ್ಲಿಗುಡ್ಡೆಯ ಪ್ರೀತಂ ಪೂಜಾರಿ (27) ಮತ್ತು ಪಡೀಲ್‌ನ ಧೀರಜ್ ಕುಮಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ರವಿವಾರ ಸಂಜೆ ವೆಲೆನ್ಸಿಯಾದಲ್ಲಿ ಈ ಇಬ್ಬರು ರೌಡಿಶೀಟರ್‌ಗಳು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಕಂಡ ಸ್ಥಳೀಯ ಐಡಿಯಲ್ ಚಿಕನ್ ಅಂಗಡಿಯ ಸಿಬ್ಬಂದಿಗಳಾದ ಸುನೀಲ್ ಮಾರ್ಡಿ, ಅನಂತ, ಜೀವನ್ ಎಂಬವರು ಅಕ್ಷೇಪಿಸಿದರು. ಇದರಿಂದ ಕುಪಿತಗೊಂಡ ರೌಡಿಶೀಟರ್‌ಗಳು ಐಡಿಯಲ್ ಚಿಕನ್ ಅಂಗಡಿಯ ಸಿಬ್ಬಂದಿಗಳಿಗೆ ಕಲ್ಲು ಮತ್ತು ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ಚೂರಿಯಿಂದ ಇರಿಯಲು ಯತ್ನಿಸಿದರು. ಅಷ್ಟರಲ್ಲಿ ಜಮಾಯಿಸಿದ ಸಾರ್ವಜನಿಕರು ಮಧ್ಯ ಪ್ರವೇಶಿಸಿದಾಗ ರೌಡಿಶೀಟರ್‌ಗಳು ಅವರಿಗೂ ಚೂರಿ ತೋರಿಸಿ ಬೆದರಿಸಿ ಭಯಭೀತಿ ಸೃಷ್ಟಿಸಿದರು. ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ತಕ್ಷಣ ಧಾವಿಸಿ ಇಬ್ಬರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಗಾಂಜಾ ಮತ್ತು ಮದ್ಯ ಸೇವನೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.