ಜೆಎನ್ ಯು ಕ್ಯಾಂಪಸ್ ನಲ್ಲಿ ಘರ್ಷಣೆ ಪ್ರಕರಣ: 16 ಮಂದಿಗೆ ಗಾಯ, ದೂರು ದಾಖಲು

Photo: ANI
ಹೊಸದಿಲ್ಲಿ: ರಾಮನವಮಿಯ ದಿನವಾಗಿರುವ ರವಿವಾರ ಹಾಸ್ಟೆಲ್ ಮೆಸ್ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡಿದ್ದಕ್ಕಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎರಡೂ ಕಡೆಯ ಕನಿಷ್ಠ ಹದಿನಾರು ವಿದ್ಯಾರ್ಥಿಗಳು ನಿನ್ನೆ ಸಂಜೆ ಕ್ಯಾಂಪಸ್ನಲ್ಲಿ ನಡೆದ ಘರ್ಷಣೆಯ ವೇಳೆ ಗಾಯಗೊಂಡಿದ್ದಾರೆ.
ಜೆಎನ್ ಯುಎಸ್ ಯು, ಎಸ್ ಎಫ್ ಐ, ಡಿಎಸ್ ಎಫ್ ಹಾಗೂ ಎಐಎಸ್ ಎ ಸದಸ್ಯರು ಇಂದು ಮುಂಜಾನೆ ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಎಬಿವಿಪಿ ಸದಸ್ಯರು ಇಂದೇ ದೂರು ನೀಡುವುದಾಗಿ ತಿಳಿಸಿದ್ದಾರೆ. ಅವರ ದೂರನ್ನು ಸ್ವೀಕರಿಸಿದ ನಂತರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ತಿಳಿಸಿದ್ದಾರೆ.





