ಅಪೂರ್ಣ ಕೆಲಸ ಪೂರ್ಣವಾಗುತ್ತಲಿರಲಿ...
ಇಂದು ಜ್ಯೋತಿಬಾ ಫುಲೆ ಜನ್ಮದಿನ

ಜ್ಯೋತಿಬಾ ಫುಲೆ
ತನ್ನ ಪ್ರಖರವಾದ ಸತ್ಯನಿಷ್ಠುರ ‘ರೈತನ ಚಾಟ’ ಎಂಬ ಅಂಕಣ ಬರಹದಿಂದ ಪತ್ರಿಕಾ ಪ್ರಪಂಚದಲ್ಲಿ ಹೊಸ ಸಂಚಲನೆಯನ್ನು ಉಂಟು ಮಾಡಿದ ಜ್ಯೋತಿಬಾ ಹಲವು ಹೊಸ ಪತ್ರಿಕೆ ಮತ್ತು ಪತ್ರಕರ್ತರಿಗೆ ಸ್ಫೂರ್ತಿ ತುಂಬಿದರು. ಮರಾಠಿಯ ಪ್ರಥಮ ಸ್ವತಂತ್ರ ಸಾಮಾಜಿಕ ನಾಟಕ ರಚಿಸಿದ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಪಾಳೇಗಾರಿ ಪರಂಪರೆಯೊಳಗಿನ ಪ್ರಗತಿಪರ ಮಹಾರಾಜರಾದ ಛತ್ರಪತಿ ಶಿವಾಜಿಯ ನೆಲಮೂಲದ ಚರಿತ್ರೆಯನ್ನು ಶೋಧಿಸಿ, ‘ಕೃಷಿಕ ಭೂಷಣ’ ‘ಶೂದ್ರಪುತ್ರ’ ಎಂದು ಕಂಡರಸಿದ್ದಲ್ಲದೆ; ಉಪೇಕ್ಷೆಗೆ ಒಳಗಾದ ಶಿವಾಜಿಯ ಸಮಾಧಿಯನ್ನು ಸಾಂಸ್ಕೃತಿಕ ಸಂಕೇತವಾಗಿ ಉಳಿಸಿಕೊಟ್ಟವರೇ ಜ್ಯೋತಿಬಾ ಎಂದರೆ ಅದು ಹೆಗ್ಗಳಿಕೆಯ ಮಾತಲ್ಲ.
ಜ್ಯೋತಿಬಾ ಫುಲೆ ಅವರು ಸಹ್ಯಾದ್ರಿಯ ಮಡಿಲಿನಲ್ಲಿ ೧೮೨೭ರಂದು ಹುಟ್ಟಿದರು. ಅವರ ಜೀವನಕ್ಕೆ ಮಹತ್ವದ ತಿರುವನ್ನು ನೀಡಿದ ವರ್ಷ ೧೮೪೮. ಅದೊಂದು ದಿನ ಅವರು ತನ್ನ ಶಾಲಾ ಸಹಪಾಠಿ ಮತ್ತು ಆತ್ಮೀಯ ಮಿತ್ರ ಸುಖಾರಾಮ್ ಯಶವಂತ ಪರಾಂಜಪೆ ಅವರ ಮದುವೆಯ ಮೊವಣಿಗೆಯಲ್ಲಿ ಲವಲವಿಕೆಯಿಂದ ಸಾಗುತ್ತಿದ್ದಾಗ ಅಲ್ಲಿದ್ದ ಬ್ರಾಹ್ಮಣರು ಅಬ್ರಾಹ್ಮಣರಾದ ಜ್ಯೋತಿಬಾ ಅವರನ್ನು ಜಾತಿನಿಂದೆಗೆ ಗುರಿಪಡಿಸಿ ಹೊರದಬ್ಬುತ್ತಾರೆ. ಅಲ್ಲಿಂದ ಸಾಮಾಜಿಕ ಸಮಾನತೆಯ ಸಂಘರ್ಷಕ್ಕೆ ಮನಮಾಡಿದ ಅವರು, ಅದೇ ವರ್ಷ ಪುಣೆಯಲ್ಲಿ ‘ಸ್ತ್ರೀಶಿಕ್ಷಣ’ ಮತ್ತು ‘ದಲಿತ ಶಿಕ್ಷಣ’ ಎಂಬ ಸಾರ್ವತ್ರಿಕ ಶೈಕ್ಷಣಿಕ ಕ್ರಾಂತಿಯ ಉಭಯ ಹಣತೆಗಳನ್ನು ಹಚ್ಚಿ ಜಡಗಟ್ಟಿದ ಅಸಮಾನತೆಯ, ಅಮಾನವೀಯತೆಯ ವಿರುದ್ಧ ಬಂಡಾಯ ಸಾರುತ್ತಾರೆ. ಅವರ ಈ ಪುರೋಗಾಮಿ ಚಳವಳಿಗೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಅನೇಕರು ನೆರವಾಗುತ್ತಾರೆ. ಅದರಿಂದಾಗಿ ಅವರು ೧೮೪೫ರಿಂದ ೧೮೫೨ರವರೆಗೆ ೧೮ ಹಗಲು ಶಾಲೆಗಳನ್ನು ತೆರೆದು ಜಗತ್ತಿನ ಇತಿಹಾಸದಲ್ಲೇ ಒಂದು ಹೊಸ ಶೈಕ್ಷಣಿಕ ದಾಖಲೆಯನ್ನು ಸ್ಥಾಪಿಸುತ್ತಾರೆ. ಇದರ ಜೊತೆಗೆ ದುಡಿದುಣ್ಣುತ್ತಾ ಬದುಕುವ ಅಕ್ಷರ
ವಂಚಿತ ಮಕ್ಕಳಿಗೆ ‘ರಾತ್ರಿಶಾಲೆ’,
ಅಕ್ಷರಲೋಕಕ್ಕೆ ಧಾರ್ಮಿಕ ದಿಗ್ಬಂಧನದಿಂದ ಬಹಿಷ್ಕೃತರಾದ ವರಿಗಾಗಿ ‘ವಯಸ್ಕರ ಶಾಲೆ’,
ಏಕಜಾತಿಯ ಮತ್ತು ಏಕಧರ್ಮೀ ಯರ ಶಿಕ್ಷಕ ವೃತ್ತಿಯ ಗುತ್ತಿಗೆಯನ್ನು ಮುರಿಯಲು ಮತ್ತು ಅವರು ಶಾಲೆಯಲ್ಲಿ ಪ್ರತಿಪಾದಿಸುತ್ತಿದ್ದ ಏಕ ಸಂಸ್ಕೃತಿಯ ವಿಕೃತಿಯನ್ನು ಮುರಿದು ಈ ನಾಡಿನ ಬಹುತ್ವವನ್ನು ಶಿಕ್ಷಣ ಕ್ಷೇತ್ರದ ಗುರುತ್ವದಿಂದ ರಕ್ಷಿಸಲು ‘ಶಿಕ್ಷಕರ ತರಬೇತಿ ಶಾಲೆ’, ಕೃಷಿಕರ ಪ್ರಯೋಗ ಮತ್ತು ಪ್ರಗತಿಗೆ ಪೂರಕವಾದ ‘ಕೃಷಿ ತರಬೇತಿ ಶಾಲೆ’, ‘ಗುಡಿಕೈಗಾರಿಕೆಗೆ ಬಲವಾಗಬಲ್ಲ’ ಕೈಗಾರಿಕಾ ತರಬೇತಿ ಶಿಬಿರ, ವಸ್ತು ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳು, ಹೀಗೆ ಬಹುರೂಪಿ ನೆಲೆಯಲ್ಲಿ ಬಹುಜನ ಸಮಾಜಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಅದರ ಪ್ರಯೋಜನ ತಳಸಮುದಾಯದ ಶೂದ್ರಾತಿ ಶೂದ್ರರಿಗೂ ದಕ್ಕುವಂತೆ ಮಾಡಿದರು.
ಇದರಿಂದಾಗಿ ಚರಿತ್ರೆಯುದ್ದಕ್ಕೂ ಆವರೆಗೆ ಮೇಲ್ವರ್ಗವೆಂಬ ಅಲ್ಪ ಸಮುದಾಯದ ದರ್ಪಕ್ಕೆ ಧ್ವನಿರಹಿತವಾಗಿದ್ದ ಬಹುಸಮುದಾಯಗಳಿಗೆ ಧ್ವನಿ ಶಕ್ತಿಯಾದರು. ಅದರ ಫಲಿತವಾಗಿ ದಲಿತ ಸಾಹಿತ್ಯದ ಮೊದಲ ಪುಟ ಅವರ ವಿದ್ಯಾರ್ಥಿನಿ ಮುಕ್ತಾ ಸಾಳ್ವೆಯಿಂದ ಬರೆಯಲ್ಪಟ್ಟರೆ, ಮುಸ್ಲಿಮ್ ಸಮುದಾಯದ ಮೊದಲ ಶಿಕ್ಷಕಿಯಾಗಿ ಫಾತಿಮಾ ಖಾನ್ ಚರಿತ್ರೆಯಲ್ಲಿ ಕೇವಲ ದಾಖಲಾದದ್ದು ಮಾತ್ರವಲ್ಲ; ಅವರ ಕ್ರಾಂತಿಕಾರಿ ಚಳವಳಿಯ ಭಾಗವಾಗಿ ತಮ್ಮ ಪ್ರತಿಭೆ ಮತ್ತು ಕೃತುಶಕ್ತಿಯಿಂದ ಅದಕ್ಕೆ ಹೊಸ ಆಯಾಮ ನೀಡಿದರು. ಅದಲ್ಲದೆ ಅವರ ವಿದ್ಯಾರ್ಥಿ ಗಳಾಗಿ ತಮ್ಮ ಅಪೂರ್ವ ಗುಣದಿಂದ ಮುಂದೆ ಆದರ್ಶ ಶಿಕ್ಷಕರಾಗಿ ಜಯಭೇರಿ ಗಳಿಸಿದ ಥುರಾಜಿ ಅಪ್ಪಾಜಿ ಚಮ್ಮಾರ್, ಗಣು ಶಿವಾಜಿ ಮಾಂಗ್ ಅಸ್ಪಶ್ಯರ ಕೇರಿಯಿಂದ ಅಕ್ಷರ ಲೋಕಕ್ಕೆ ಇಟ್ಟ ಲಗ್ಗೆ ನಮ್ಮ ಸಮತಾ ಸಮಾಜದ ಪ್ರತಿಭೆ ಮತ್ತು ಸಾಧನೆಗೆ ಹಿಡಿದ ಕೈಗನ್ನಡಿಯಾಯಿತು. ಅದರ ಜೊತೆಗೆ ತನ್ನ ಅಶಿಕ್ಷಿತ ಪಾಲಿತ ಮಾತೆ ಸುಗುಣಾಬಾಯಿ ಮತ್ತು ಮಡದಿ ಸಾವಿತ್ರಿಬಾಯಿ ಇಬ್ಬರನ್ನೂ ಸಮರ್ಥ ಶಿಕ್ಷಕಿಯರನ್ನಾಗಿ ರೂಪಿಸಿದಲ್ಲದೆ ಸಾವಿತ್ರಿಬಾಯಿ ಮೊದಲ ಭಾರತೀಯ ಶಿಕ್ಷಕಿಯಾಗಿ ಚರಿತ್ರೆಯಲ್ಲಿ ಸ್ಥಾನ ಪಡೆದರು. ಸುಗುಣಾಬಾಯಿ ಜನಪ್ರಿಯ ಶಿಕ್ಷಕರಾಗಿ ಮಕ್ಕಳ ಮೆಚ್ಚಿನ ‘ಅವೂ ಟೀಚರ್’ ಆದರು.
ಹೀಗೆ ಚರಿತ್ರೆಯ ಪ್ರಗತಿಯ ಚಕ್ರ ತಿರುಗುತ್ತಿರುವಾಗ ತನ್ನನ್ನು ಕೊಲೆ ಮಾಡಲು ಬಂದ ಬಾಡಿಗೆಯ ಬಂಟರಾದ ದೋಂಡಿಬಾ ಮತ್ತು ಸಾಜನ್ರ ಮನ ಪರಿವರ್ತಿಸಿ ತನ್ನ ವಿದ್ಯಾರ್ಥಿಗಳನ್ನಾಗಿಸಿದ್ದು ಮಾತ್ರವಲ್ಲ ದೋಂಡಿಬಾ ಕುಂಬಾರ್ ಅನನ್ಯ ಸಾಹಿತಿಯಾಗಿ ಪಂಡಿತ ದೋಂಡಿಬಾನೆಂದು ಖ್ಯಾತಿ ಪಡೆದರೆ; ರಾಮೋಶಿ ಸಜ್ಜನ್ ರೋಡೆ ತನ್ನ ಅಪೂರ್ವ ಕಂಠಶ್ರೀಯಿಂದ ಕಲಾಲೋಕದ ತಾರೆಯಾಗಿ ಮಿಂಚಿದರು. ಇವರು ಜ್ಯೋತಿಬಾ ಅವರ ಜನಪದೀಯ ಕಲೆಗಳಿಗೆ ಹೊಸ ಮೊಗು ನೀಡಿದರು. ಮರಾಠಿ ಮಣ್ಣಿನಲ್ಲಿನ ‘ತಮಾಷಾ’ ಮತ್ತು ‘ಝಲ್ಲಾ’ ಕಲಾಪ್ರಕಾರಗಳಿಗೆ ಹೊಸ ಶಕ್ತಿ ತುಂಬಿ ಅದನ್ನು ತನ್ನ ಸತ್ಯಶೋಧಕ ಸಮಾಜದ ಜನಜಾಗೃತಿಯ ಸಶಕ್ತ ಮಾಧ್ಯಮವನ್ನಾಗಿಸಿದರು. ಇವರು ೧೮೫೨ರಲ್ಲಿ ಸ್ಥಾಪಿಸಿದ ‘ಧರ್ಮಾರ್ಥ ಪುಣೆ ಲೈಬ್ರೆರಿ’ ಆಧುನಿಕ ಭಾರತದಲ್ಲಿ ಭಾರತೀಯರಿಂದ ಸ್ಥಾಪಿತವಾದ ಮೊದಲ ಲೈಬ್ರೆರಿ ಎಂಬ ಹೆಗ್ಗಳಿಕೆಗೆ ಪಾತ್ರ ವಾಯಿತಲ್ಲದೆ ಇದು ಲೇಖಕ ಮತ್ತು ಓದುಗರನ್ನು ಸಂಪರ್ಕಿಸುವ ಚಾವಡಿಯಾಗಿ ಕಾರ್ಯವೆಸಗಿತು. ಅದೇ ರೀತಿ ಸಾವಿತ್ರಿಬಾಯಿ ಅವರ ಹಿರಿತನದಲ್ಲಿ ೧೮೫೨ರಲ್ಲೇ ಕಟ್ಟಲ್ಪಟ್ಟ ‘ಮಹಿಳಾ ಸೇವಾ ಮಂಡಳಿ’ ಭಾರತದ ಮೊದಲ ಮಹಿಳಾ ವೇದಿಕೆಯಾಗಿ ಚರಿತ್ರೆಯಲ್ಲಿ ಗೌರವದ ಸ್ಥಾನ ಪಡೆದ ಒಂದು ಜಾತ್ಯತೀತ ಮತ್ತು ಮತಾತೀತ ವೇದಿಕೆಯಾಯಿತು.
ಇದಲ್ಲದೆ ಜನಭಾಷೆಯ ತಲೆಮೆಟ್ಟಿ ಸಂಸ್ಕೃತ ಭಾಷೆ ಮೊೆಯುತ್ತಿದ್ದಾಗ ಅದಕ್ಕೆ ಸಡ್ಡು ಹೊಡೆದು ಮರಾಠಿ ಭಾಷೆಯೂ ಸೇರಿದಂತೆ ಎಲ್ಲ ಸ್ಥಳೀಯ ಭಾಷೆಗಳಿಗೂ ಸರಕಾರದಿಂದ ಗೌರವ ಸ್ಥಾನಮಾನ ದೊರೆಯುವಂತೆ ಧ್ವನಿಯೆತ್ತಿದ ಸಫಲ ಹೋರಾಟಗಾರ ಜ್ಯೋತಿಬಾ ಆಗಿದ್ದರು. ಅಂದಿನ ದಿನಗಳಲ್ಲಿ ಉಳ್ಳವರ ಅಂಗಳದಲ್ಲಿ ತೊತ್ತಾಗಿ ಬಿದ್ದಿದ್ದ ಮರಾಠಿ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ನಿರಾಕರಿಸಿದ್ದಲ್ಲದೆ ಅದರ ಗುತ್ತೇದಾರಿಗೆ ‘‘ಬಡವರನ್ನು ಶೋಷಿಸುತ್ತಿರುವ ನಿಮ್ಮೊಡನೆ ನಮ್ಮ ಸಂಘಟನೆಗಳು ಸೇರಿಕೊಳ್ಳುವುದು ಎಂತು ಸಾಧ್ಯ?’’ ಎಂದು ಸವಾಲೆಸೆದು ಈ ಸಮ್ಮೇಳನವನ್ನೇ ಬಹಿಷ್ಕರಿಸಿದ್ದರು. ಅಷ್ಟೇ ಏಕೆ ‘‘ನಿಮ್ಮಲ್ಲಿ ರೈತ ಪ್ರತಿನಿಧಿಗಳಿದ್ದಾರೆಯೇ?’’ ಎಂಬ ಪ್ರಶ್ನೆಯನ್ನು ಅಂದಿನ ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದವರಲ್ಲಿ ಜ್ಯೋತಿಬಾ ಮೊದಲಿಗರಾಗಿದ್ದರು.
ತನ್ನ ಪ್ರಖರವಾದ ಸತ್ಯನಿಷ್ಠುರ ‘ರೈತನ ಚಾಟ’ ಎಂಬ ಅಂಕಣ ಬರಹದಿಂದ ಪತ್ರಿಕಾ ಪ್ರಪಂಚದಲ್ಲಿ ಹೊಸ ಸಂಚಲನೆಯನ್ನು ಉಂಟು ಮಾಡಿದ ಜ್ಯೋತಿಬಾ ಹಲವು ಹೊಸ ಪತ್ರಿಕೆ ಮತ್ತು ಪತ್ರಕರ್ತರಿಗೆ ಸ್ಫೂರ್ತಿ ತುಂಬಿದರು. ಮರಾಠಿಯ ಪ್ರಥಮ ಸ್ವತಂತ್ರ ಸಾಮಾಜಿಕ ನಾಟಕ ರಚಿಸಿದ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಪಾಳೇಗಾರಿ ಪರಂಪರೆಯೊಳಗಿನ ಪ್ರಗತಿಪರ ಮಹಾರಾಜರಾದ ಛತ್ರಪತಿ ಶಿವಾಜಿಯ ನೆಲಮೂಲದ ಚರಿತ್ರೆಯನ್ನು ಶೋಧಿಸಿ, ‘ಕೃಷಿಕ ಭೂಷಣ’ ‘ಶೂದ್ರಪುತ್ರ’ ಎಂದು ಕಂಡರಸಿದ್ದಲ್ಲದೆ; ಉಪೇಕ್ಷೆಗೆ ಒಳಗಾದ ಶಿವಾಜಿಯ ಸಮಾಧಿಯನ್ನು ಸಾಂಸ್ಕೃತಿಕ ಸಂಕೇತವಾಗಿ ಉಳಿಸಿಕೊಟ್ಟವರೇ ಜ್ಯೋತಿಬಾ ಎಂದರೆ ಅದು ಹೆಗ್ಗಳಿಕೆಯ ಮಾತಲ್ಲ.
ಜ್ಯೋತಿಬಾ ಅವರು ಸಮತಾಧಿಷ್ಠ ಸಾಮಾಜಿಕ ಕ್ರಾಂತಿಯ ‘ಸತ್ಯಶೋಧಕ ಸಮಾಜ’ ಎಂಬ ಜಂಗಮ ವೇದಿಕೆಯನ್ನು ೧೮೭೩ರಲ್ಲಿ ಕಟ್ಟಿ ತನ್ನ ಚಳವಳಿಯನ್ನು ವಿಕೇಂದ್ರೀಕರಣದತ್ತ ಸಾಗಿಸುವ ಮುನ್ನ ವಿಧವೆಯರ, ರೈತರ, ಕಾರ್ಮಿಕರ ಸಮಸ್ಯೆಗಳತ್ತ ಗಮನ ಹರಿಸಿದ್ದಲ್ಲದೆ ಅಲ್ಲಿನ ಸಮಸ್ಯೆ ಮತ್ತು ಅದರ ನಿವಾರಣೆಗಾಗಿ ತನ್ನ ಲೇಖನಿಯನ್ನು ಪತ್ರಿಕಾ ಬರಹಗಳ ಮುಖೇನ ಜನಜಾಗೃತಿಗಾಗಿ ಅಹರ್ನಿಶಿ ಪ್ರಯತ್ನಿಸಿದರು. ಅವರು ೧೮೫೪ರಲ್ಲಿ ಪ್ರಕಟಿಸಿದ ‘ಮನುಸ್ಮತಿಗೆ ಧಿಕ್ಕಾರ’ದಿಂದ ೧೮೯೦ರಲ್ಲಿ ಬರೆದು ಮುಗಿಸಿದ ‘ಸಾರ್ವಜನಿಕ ಸತ್ಯಧರ್ಮ’, ಅದಲ್ಲದೆ ಅವರ ‘ಗುಲಾಮಗಿರಿ’ ಕೃತಿಯೂ ಸೇರಿದಂತೆ ಹತ್ತಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿ ಅಲ್ಲೂ ಪೀಡಿತ, ಶೋಷಿತ, ಉಪೇಕ್ಷಿತರಿಗೆ ನಾಲಿಗೆಯಾದದ್ದು ಮಾತ್ರವಲ್ಲ, ನೂರಾರು ಉಪೇಕ್ಷಿತ ಪ್ರತಿಭೆಗಳು ಸಾಹಿತ್ಯ ಲೋಕದಲ್ಲಿ ಮತ್ತು ಕಲಾಲೋಕದಲ್ಲಿ ದಾಂಗುಡಿಯಿಡಲು ಕಾರಣರಾದರು. ತನ್ನ ಉಸಿರಿನಲ್ಲಿ ಶೋಷಿತಪರ ಕಾಳಜಿಯ ಕಾವನ್ನು ನಿರಂತರ ಕಾಪಾಡುತ್ತಾ ತನ್ನ ಉದ್ಯಮಶೀಲತೆ ಮತ್ತು ಪ್ರಯೋಗ ಶೀಲತೆಯಿಂದ ಕೃಷಿ ಮತ್ತು ಉದ್ಯಮ ರಂಗದಲ್ಲಿ ದೀನ ದಲಿತರು ಪ್ರವೇಶಿಸುವ ಸ್ಫೂರ್ತಿ ಚೇತನರಾದರು. ಎಂದೂ ಯಾವುದೇ ಮತ ವ್ಯಾಮೋಹಕ್ಕೆ ಮತ್ತು ಜಾತಿ ವ್ಯಾಮೋಹಕ್ಕೆ ಬಲಿಬೀಳದ ಈ ಸಮಾಜ ಚಿಂತಕ ಜ್ಯೋತಿಬಾ ಅವರಿಗೆ ಅವರ ೬೧ನೆಯ ವಯಸ್ಸಿನಲ್ಲಿ ಅಂದರೆ ೧೮೮೮ರ ಜುಲೈಯಲ್ಲಿ ಪಾರ್ಶ್ವವಾಯು ಬಡಿಯಿತು!
ಇದರಿಂದ ಅವರ ಶರೀರದ ಬಲಭಾಗ ಚೈತನ್ಯ ರಹಿತವಾಯಿತು. ಆಗ ತನ್ನ ತಾಳಲಾರದ ನೋವಿನ ನಡುವೆಯೂ ಎಡಗೈಯಿಂದ ಬರವಣಿಗೆ, ಪತ್ರ ವ್ಯವಹಾರವನ್ನು ಮುಂದುವರಿಸಿದ್ದಲ್ಲದೆ, ಮಾರ್ಗದರ್ಶನಕ್ಕೆ ದಿನನಿತ್ಯ ಬರುತ್ತಿದ್ದ ನೂರಾರು ಮಂದಿಯೊಡನೆ ಸಮಾಲೋಚನೆ ನಡೆಸುತ್ತಿದ್ದರು. ತನ್ನ ನೋವಿನ ನಡುವೆಯೂ ಇತರರ ನಲಿವಿಗಾಗಿ ಪರಿತಪಿಸುತ್ತಿದ್ದ ಈ ಹಿರಿಯ ಚೇತನಕ್ಕೆ ೧೮೮೮ರ ಡಿಸೆಂಬರದಲ್ಲಿ ಎರಡನೇ ಬಾರಿ ಪಾರ್ಶ್ವವಾಯು ಬಡಿಯಿತು. ಅಲ್ಲಿಂದ ಪರಿಸ್ಥಿತಿ ಗಂಭೀರತೆಗೆ ತಿರುಗಿತಾದರೂ ತನ್ನ ಇಚ್ಛಾಶಕ್ತಿಯ ಬಲದಿಂದ ದಿನಾಂಕ ೪ ಫೆಬ್ರವರಿ ೧೮೮೯ರಂದು ಮಗ ಯಶವಂತನ ಮದುವೆಗೆ ಸಾಕ್ಷಿಯಾಗುತ್ತಾರೆ. ಪುಣೆ ಸನಿಹದ ಹಡಪಸರ ಸತ್ಯಶೋಧಕ ಸಮಾಜದ ಸದಸ್ಯರಾದ ಜ್ಞಾನೋಬಾ ಕೃಷ್ಣರಾವ್ ಸಸಾಣೆ ಅವರ ಮಗಳು ರಾಧೆಯೊಂದಿಗೆ ಸತ್ಯಶೋಧಕ ಸಮಾಜದ ವಿಧಿವಿಧಾನದಿಂದಲೇ ಯಶವಂತನ ವಿವಾಹ ನಡೆದು ವಧುವಿಗೆ ತನ್ನ ಸೊಸೆಗೆ ಜ್ಯೋತಿಬಾ ‘ಲಕ್ಷ್ಮೀ’ ಎಂಬ ಹೊಸ ಹೆಸರು ಇಡುತ್ತಾರೆ. ಇದು ಸಾವಿತ್ರಿಬಾಯಿ ಅವರ ತಾಯಿಯ ಹೆಸರೂ ಆಗಿತ್ತು ಎನ್ನುವುದು ಉಲ್ಲೇಖನೀಯ. ಹೀಗೆ ರಾಧೆ ‘ಲಕ್ಷ್ಮೀ’ ಎಂಬ ಹೊಸ ನಾಮಧರಿಸಿ ಯಶವಂತನ ಮಡದಿಯಾಗಿ ಗಂಜ್ಪೇಟೆಯ ಜ್ಯೋತಿಬಾ ಫುಲೆ ಅವರ ಪರಿವಾರದ ಹೊಸ ಸದಸ್ಯೆಯಾಗಿ ಸೇರುತ್ತಾ ಮುಂದೆ ಇಬ್ಬರು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರ ಇಚ್ಛೆಯಂತೆ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾರೆ.
ಜ್ಯೋತಿಬಾ ಅಲ್ಲಿಗೆ ಸುಮ್ಮನಾಗದೆ ದತ್ತುಪುತ್ರ ಯಶವಂತನೇ
ತನ್ನ ಖಾಸಗಿ ಸ್ಥಿರ ಚರ ಆಸ್ತಿಗಳಿಗೆ ತನ್ನ ಮತ್ತು ಸಾವಿತ್ರಿಬಾಯಿ ಯವರ ಆನಂತರ ಹಕ್ಕುದಾರ ನೆಂದು ತನ್ನ ಉಯಿಲನ್ನು ೧೦ ಜುಲೈ, ೧೮೮೯ರಲ್ಲಿ ದೃಢೀಕರಿಸುತ್ತಾರೆ. ಅಲ್ಲಿಂದ ಅವರ ಆರೋಗ್ಯ ಹದಗೆಡುತ್ತಾ ಬಂದಾಗ ತನ್ನ ಅಂತ್ಯಕಾಲ ಸಮೀಪಿಸಿದ್ದು ಅವರಿಗೆ ಅರಿವಾಗುತ್ತದೆ. ಆಗ ತನ್ನ ಅತೀ ಗಂಭೀರ ಸ್ಥಿತಿಯಲ್ಲೂ ೨೭ ನವೆಂಬರ್ ೧೮೯೦ ರಂದು ಸಂಜೆ ೫ ಗಂಟೆಗೆ ತಮ್ಮ ಹತ್ತಿರದವರನ್ನೆಲ್ಲಾ ಬರಹೇಳುತ್ತಾರೆ. ಅದಾಗಲೇ ತನ್ನ ದೀರ್ಘಕಾಲದ ವೈದ್ಯಕೀಯ ಪರಿಣತಿಗೆ ಸೋಲಾ
ಗುತ್ತಿರುವ ಸೂಚನೆ ಕಂಡರೂ ತನ್ನ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಸತ್ಯಶೋಧಕ ಸಮಾಜದ ಕಟ್ಟಾಳು ಡಾ. ವಿಶ್ರಾಮ್ ಗೋಲೆ ಆಗ ಅವರ ಮೈದಡವುತ್ತಿರುತ್ತಾರೆ.
‘‘ಗೆಳೆಯರೇ, ಈಗ ನಾನು ನಿಮಗೆಲ್ಲಾ ವಿದಾಯ ಹೇಳುವ ಕಾಲ ಬಂದಿದೆ. ಹುಟ್ಟಿದವರೆಲ್ಲಾ ಸಾಯಲೇ ಬೇಕು ಅಲ್ಲವೇ? ನೀವೆಲ್ಲಾ ಸತ್ಯಶೋಧನೆಯಲ್ಲಿ, ಸಮತಾ ಸಮಾಜ ಕಟ್ಟುವಲ್ಲಿ ನೀಡಿದ ಸಹಾಯ ಸಹಕಾರಗಳಿಗೆ ಬೆಲೆ ಕಟ್ಟುವುದು ಅಸಾಧ್ಯ. ಅದರಿಂದಾಗಿಯೇ ಎಲ್ಲಾ ಪ್ರತಿಕೂಲ ಪರಿಸ್ಥಿತಿಯಲ್ಲೂ, ಬಹುವಿಧದ ಪ್ರತಿಭಟನೆಗಳ ನಡುವೆಯೂ ನಾವು ಕೈಗೆತ್ತಿಕೊಂಡ ಕೆಲಸಗಳು ಸರಿಸುಮಾರು ಯಶಸ್ಸನ್ನು ಪಡೆದಿದೆ. ಆ ಸಮಾಧಾನ ನನಗಿದೆ. ಇಂದು ಸಮಾಜದ ಎಲ್ಲಾ ವರ್ಗಗಳಿಂದಲೂ ಪ್ರತಿಭಾಶಾಲಿಗಳು, ವಿವೇಕಿಗಳು ಬರುತ್ತಲಿದ್ದಾರೆ. ಸ್ತ್ರೀಯರಲ್ಲೂ ಹೊಸ ಎಚ್ಚರ ಮೂಡಿದೆ. ಅವರು ಕೂಡಾ ಸ್ವಾತಂತ್ರ್ಯ, ಸಮಾನತೆಯತ್ತ ಧ್ವನಿಯೆತ್ತತೊಡಗಿದ್ದಾರೆ. ಮುಂದೆಯೂ ಅದು ಯಾವತ್ತೂ ದಮನವಾಗದಂತೆ ಎಚ್ಚರ ವಹಿಸಿ. ಎಲ್ಲಿ ಸಾಮಾಜಿಕ ಸಮಾನತೆ ಇಲ್ಲವೋ ಅಲ್ಲಿ ಸ್ವಾತಂತ್ರ್ಯದ
ಪರಿಕಲ್ಪನೆಯೇ ಅರ್ಥವಿಲ್ಲದ ಸಲ್ಲಾಪವಾಗುತ್ತದೆ. ಹಾಗಾಗದಿರಲಿ,
ಅದಕ್ಕಾಗಿ ನಮ್ಮ ಹೋರಾಟ ವ್ಯಕ್ತಿನಿಷ್ಠವಾಗದೆ ಸಮುದಾಯ ನಿಷ್ಠವಾಗಿರಲಿ. ನಮ್ಮ ಕನಸಿನ ಅಪೂರ್ಣ ಕೆಲಸಗಳು ಪೂರ್ಣವಾಗುತ್ತಲಿರಲಿ’’ ಎಂದು ಅವರಿಗೆ ಪುನರಪಿ ತಮ್ಮ ಸಾಮಾಜಿಕ ಕ್ರಾಂತಿಯ ನೆಲೆ ನಿಲುವು ಗಳನ್ನು ಸ್ಪಷ್ಟಪಡಿಸುತ್ತಾರೆ.
ಅವರೆಲ್ಲಾ ನಿರ್ಗಮಿಸಿದ ಬಳಿಕ ಈ ಚಳವಳಿ ತನ್ನ ನಂತರವೂ ವ್ಯಕ್ತಿನಿಷ್ಠ ವಾಗದೆ ತತ್ವನಿಷ್ಠವಾಗಿ ಮುಂದುವರಿಯುವ ಅಗತ್ಯವನ್ನು ಮಡದಿ ಸಾವಿತ್ರಿಬಾಯಿಗೆ ತಿಳಿಸುತ್ತಾರೆ. ಮಗ ಯಶವಂತನಿಗೆ ‘‘ನೀನೊಬ್ಬ ಸಮಾಜ ಸೇವಾಸಕ್ತ ಸಫಲ ವೈದ್ಯನಾಗೆಂದೂ, ಸೊಸೆ ಲಕ್ಷ್ಮೀಗೆ ಸ್ವತಂತ್ರ ಸ್ವಾಭಿಮಾನದ ಪಥದಲ್ಲಿ ಶೋಷಿತ ಸಮುದಾಯಕ್ಕೆ ದಾರಿದೀಪವಾಗೆಂದೂ ಕಿವಿಮಾತು ಹೇಳುತ್ತಾರೆ. ಮತ್ತೆ ಸಾವಿತ್ರಿಬಾಯಿಯವರನ್ನು ಹತ್ತಿರ ಕರೆದು ಯಾವತ್ತೂ ತಮ್ಮ ಚಳವಳಿಯ ಆಶಯ ಬರಡಾಗದಂತೆ ಎಚ್ಚರ ವಹಿಸು, ನಿನ್ನ ಬರವಣಿಗೆಯನ್ನು ಮುಂದುವರಿಸು. ನಿನ್ನೊಳಗಿನ ಕಾವ್ಯಶಕ್ತಿಯೇ ನಿನ್ನ ಬದುಕಿಗೆ ಬಲ ನೀಡಬಲ್ಲ ಕಸುವನ್ನು ಪಡೆದಿದೆ. ನಮ್ಮ ಹೋರಾಟಕ್ಕೆ ಮುಂಬಲವಾಗಿದ್ದ
ನಮ್ಮ ‘ಅವೂ’ (ಪಾಲಿತ ಮಾತೆ ಸುಗುಣಾಬಾಯಿ) ೧೮೫೩ರಲ್ಲಿ ಗತಿಸಿದರು. ಆಬಳಿಕ ನಮಗೆ ರಕ್ಷಾಬಲವಾಗಿದ್ದ ಕ್ರಾಂತಿಗುರು ಲಾಹೂಜಿ ಸಾಳ್ವೆ ೧೮೮೧ರಲ್ಲಿ ನಮ್ಮನ್ನಗಲಿದರು. ಕಾಲ ಯಾರಿಗೂ ಕಾಯ ಲಾರದು. ‘ಕಾಲದ ಕಲಿಗಳಾಗಿ’ ಸತ್ಯಶೋಧಕರಾಗಿ ಸ್ವಾವಲಂಬಿಗಳಾಗಿ ಬದುಕುವುದೇ ಮಾನವ ಧರ್ಮ, ಅದರಂತೆ ೧೮೪೦ರಿಂದ ನಮ್ಮ ದಾಂಪತ್ಯ ಜೀವನ ನಿರಂತರವಾಗಿ ಮುನ್ನಡೆಯಿತು. ನನಗೆ ಹಿಂಬಲವಾಗಿ ನಿಂತು ಕಳೆದ ೫೦ ವರ್ಷಗಳಿಂದ ನನಗೆ ನೈತಿಕ ಶಕ್ತಿಯಾದ ನೀನು ಇನ್ನು ಮುಂದೆ ನಮ್ಮ ಮಗ ಯಶವಂತ ಮತ್ತು ನನ್ನ ಮುದ್ದಿನ ಸೊಸೆ ಲಕ್ಷ್ಮೀಗೆ ಮುಂಬಲವಾಗಬೇಕು. ಸತ್ಯಶೋಧಕ ಸಮಾಜದ ಮುಂದಿನ ಚರಿತ್ರೆಗೆ ಮುನ್ನುಡಿ ಬರೆಯಬೇಕು. ಈ ಚಳವಳಿ ನಮ್ಮ ಆನಂತರದ ದಿನಗಳಲ್ಲೂ ಸಮಾಜ ಪ್ರಬೋಧನೆಯಲ್ಲಿ ಗತಿ ಪಡೆಯುತ್ತಿರಬೇಕು’’ ಎಂದಾಗ ಸಾವಿತ್ರಿಬಾಯಿ ಜ್ಯೋತಿಬಾ ಅವರನ್ನು ಅಪ್ಪಿಹಿಡಿದು ‘‘ನಮ್ಮ ಸರ್ವೋದ್ಧಾರಕ ತತ್ವದ ಸತ್ಯಶೋಧನೆಯ ನಿಷ್ಠೆಗೆ,
ಅದರೊಳಗಿನ ಅಚಲ ಸಮತಾನಿಷ್ಠೆಗೆ ನಿಮ್ಮ ಮಡದಿ ಮಕ್ಕಳಿಂದ ಯಾವತ್ತೂ ಕಳಂಕ ಬರದಂತೆ ನಡೆಯುತ್ತೇವೆ’’ ಎಂದು ಹೇಳುತ್ತಿರುವಾಗ ಯಶವಂತ ಮತ್ತು ಲಕ್ಷ್ಮೀ ಒತ್ತರಿಸಿ ಬರುವ ದುಃಖವನ್ನು ತಡೆಯುತ್ತಾ ಅವರ ಕಾಲು ಹಿಡಿದಿದ್ದರು! ಬಹು ಪ್ರಯಾಸದಿಂದ ಅವರೆಲ್ಲರ ತಲೆ ನೇವರಿಸಿದ ಜ್ಯೋತಿಬಾ ಎಲ್ಲರೊಡನೆ ಬಹು ಪ್ರಯಾಸದಿಂದ ಉಣ್ಣುತ್ತಾರೆ. ಆ ಬಳಿಕ ಅವರು ತನ್ನ ಹಿತೈಷಿಗಳನ್ನೆಲ್ಲಾ ಕರೆಯುವಂತೆ ತಿಳಿಸುತ್ತಾರೆ. ಇಷ್ಟಾಗುವಾಗ ರಾತ್ರಿ ೧೦ ಗಂಟೆಯಾಗುತ್ತದೆ! ಇನ್ನು ತಡ ಮಾಡುವುದು ಉಚಿತವಲ್ಲ ಎಂದು ಮನಗಂಡು ತಾನೇ ರಚಿಸಿದ ಸಮತಾಧಿಷ್ಠ ಸಮತಾ ಸಮಾಜದ ಜಾತ್ಯತೀತ, ಮತಾತೀತ ಮಾನವ ಚೇತನಕ್ಕೆ ನಮಿಸುವ ‘ಸಾಮೂಹಿಕ ಪ್ರಾರ್ಥನೆ’ ಪ್ರಾರಂಭಿಸುವಂತೆ ಸೇರಿದವರನ್ನು ವಿನಂತಿಸುತ್ತಾರೆ. ಸಾಮೂಹಿಕ ಪ್ರಾರ್ಥನೆ ಪ್ರಾರಂಭವಾದಾಗ ತಾನೂ ಅದಕ್ಕೆ ಧ್ವನಿ ಸೇರಿಸುತ್ತಾರೆ. ಮನೆಯ ಮುಂದೆ ಜನಸಂದಣಿ ಹೆಚ್ಚುತ್ತಲಿದೆ! ಸಮೂಹಗಾನದ ಧ್ವನಿ ಬಲವಾಗುತ್ತಿದೆ. ಅದು ಮಧ್ಯರಾತ್ರಿ ಕಳೆದು ೨ ಗಂಟೆ ೨೦ ನಿಮಿಷಕ್ಕೆ ‘ಸಾಮಾಜಿಕ ಸಮತಾ ಸಮರದ ಮಹಾರಥಿ’ ಯುಗಪ್ರವರ್ತಕ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಕಾಲದಲ್ಲಿ ಲೀನವಾಗುತ್ತಾರೆ!
ಕೃಪೆ: (ಜ್ಯೋತಿಬಾ ಬೆಳಕು-ಬೆರಗು)







