ಜನರಿಗೆ ಮರಳು ಒದಗಿಸಲು ತಕ್ಷಣ ಸೂಕ್ತ ಕ್ರಮ ಅಗತ್ಯ : ಯು.ಟಿ.ಖಾದರ್

ಮಂಗಳೂರು: ರಾಜ್ಯದಲ್ಲಿ ಮರಳುಗಾರಿಕೆಗೆ ಸಮರ್ಪಕ ನೀತಿ ಇಲ್ಲದೆ ಜನ ಸಾಮಾನ್ಯರಿಗೆ ಮನೆ ಕಟ್ಟಲು ಮರಳು ದೊರೆಯದೆ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಸರಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸರಕಾರ ಸೂಕ್ತ ಮರಳು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ವಿಫಲವಾದ ಕಾರಣ ಅನಧಿಕೃತವಾಗಿ ಮರಳುಗಾರಿಕೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಜನ ಸಾಮಾನ್ಯರು ದುಬಾರಿ ಬೆಲೆ ನೀಡಿ ಮರಳು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಖಾದರ್ ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಮರಳು ತೆಗೆಯಲು ಸಾಧ್ಯವಾಗುವುದಿಲ್ಲ. ಕಳೆದ ಆಗಸ್ಟ್ ನಿಂದ ಮರಳುಗಾರಿಕೆ ಅವಕಾಶ ನೀಡದೆ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿದೆ ಈ ಬಗ್ಗೆ ಸರಕಾರ ಜನರಿಗೆ ವಿವರ ನೀಡ ಬೇಕಾಗಿದೆ. ಸಿಆರ್ ಝೆಡ್ ಹೊರತಾದ ಪ್ರದೇಶದಲ್ಲಿ ಮರಳುಗಾರಿಕೆ ಅವಕಾಶ ನೀಡಲು ಗುರುತಿಸಲಾದ ಬ್ಲಾಕ್ ಗಳಲ್ಲಿ ಮರಳುಗಾರಿಕೆ ನಡೆಸಲು ಟೆಂಡರ್ ಕರೆದ ಬಳಿಕವೂ ಮರಳು ಎತ್ತಲು ಅವಕಾಶ ನೀಡದಿರುವುದು ಮರಳಿನ ಅಭಾವಕ್ಕೆ ಕಾರಣವಾಗಿದೆ. ಸೂಕ್ತ ಕಾರಣವಿಲ್ಲದೆ ಮರಳಿನ ದರವನ್ನು ಏರಿಸಿರುವ ಬಗ್ಗೆ ಸರಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೋಮುವಾದಿಗಳನ್ನು ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಮೌನ ಮುರಿದು ಜನತೆಗೆ ಉತ್ತರ ನೀಡಬೇಕಾಗಿದೆ. ಈ ರೀತಿಯ ಕೋಮು ದ್ವೇಷದ ಕೃತ್ಯ ರಾಜ್ಯದ ಇತಿಹಾಸ ದಲ್ಲಿ ಒಂದು ಕಪ್ಪು ಚುಕ್ಕಿ, ಸರಕಾರದ ವೈಫಲ್ಯದಿಂದ ಇಂತಹ ಕೃತ್ಯ ನಡೆಯುತ್ತಿದೆ. ಕೋಮುವಾದಿಗಳ ಮಟ್ಟ ಹಾಕಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬಿಜೆಪಿಯಿಂದ ಕರ್ನಾಟಕದ ಘನತೆ, ಗೌರವಕ್ಕೆ ಧಕ್ಕೆಯಾಗಿದೆ. ಶೇ. 90ರಷ್ಟು ಜನ ಇಂತಹ ವಿಚಾರವನ್ನು ಒಪ್ಪುವುದಿಲ್ಲ. ಧಾರವಾಡ ಘಟನೆಯನ್ನು ಸರ್ವ ಧರ್ಮೀಯರು ಖಂಡಿಸಿದ್ದಾರೆ. ಇಂತಹ ವಿಚಾರ ರಾಜ್ಯ ಸರಕಾರಕ್ಕೆ ತಿರುಗುಬಾಣವಾಗಲಿದೆ. ಆಡಳಿತ ಪಕ್ಷದ ನಾಯಕರು, ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಈಗಲಾದರೂ ಮಾತಾಡಬೇಕು. ಜನತೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಖಾದರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಫಾರೂಕ್ ತುಂಬೆ, ಸುರೇಶ್ ಭಟ್ನಗರ, ಜಯರಾಜ್, ರವಿ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.
