ಮಂಗಳೂರು: ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಮಂಗಳೂರು : ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರವ್ಯಾಪಿಯಾಗಿ ಸಿಪಿಐ ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ಸಮಿತಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ವಿ. ಕುಕ್ಯಾನ್, 2014ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲಿ ಬೆಲೆ ಏರಿಕೆಯಿಂದಾಗಿ ಜನರ ಪರಿಸ್ಥಿತಿ ನೋಡಿ ಕಣ್ಣೀರು ಬರುವುದಾಗಿ ಹೇಳಿ ಪ್ರಧಾನಿಯಾದ ಬಳಿಕ ಬೆಲೆ ಏರಿಕೆಯನ್ನು ಹೆಚ್ಚಿಸುತ್ತಲೇ ಸಾಗಿದ್ದಾರೆ ಎಂದು ಆರೋಪಿಸಿದರು.
ಅಂದು ಪೆಟ್ರೋಲ್‌ಗೆ 58 ರೂ.ಗಳಿದ್ದು, ಇಂದು ಅದು 110 ರೂ.ಗಳಿಗೆ ತಲುಪಿದೆ. ಹಾಗಿದ್ದರೂ ಅಂದು ಬಂದ ಕಣ್ಣೀರು ಪ್ರಧಾನಿ ಮೋದಿಯವರಿಗೆ ಈಗ ಬರುತ್ತಿಲ್ಲ. ಅಂದು ಕಂಡ ಜನರ ನೋವು ಇಂದು ಪ್ರತಿಯೊಂದು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಇಂದು ಕಾಣುತ್ತಿಲ್ಲ. ಇಂದು ಬೆಲೆ ಏರಿಕೆಯೇ ಅವರ ರಾಷ್ಟ್ರ ಭಕ್ತಿಯಾಗಿ ಮುಂದುವರಿದಿದೆ ಎಂದು ಅವರು ಹೇಳಿದರು.
ಅಧಿಕಾರ ಶಾಶ್ವತ ಅಲ್ಲ. ಜನರ ಸಂಕಷ್ಟಗಳನ್ನು ನಿವಾರಿಸುವುದು, ಬೆಲೆ ಏರಿಕೆ ನಿಯಂತ್ರಿಸುವುದು ಆಡಳಿತ ಮಾಡುವವರ ಕರ್ತವ್ಯ. ಆದರೆ ಅದ್ಯಾವುದೂ ಆಗುತ್ತಿಲ್ಲ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ಸೀತಾರಾಂ ಬೇರಿಂಜ, ಕರುಣಾಕರ, ಜಗತ್ಪಾಲ್ ಕೋಡಿಕಲ್, ಸುಧಾಕರ ಕಲ್ಲೂರು, ಸುಲೋಚನ ಕವತ್ತಾರು, ಸಂಜೀವಿನಿ ಹಳೆಯಂಗಡಿ ಉಪಸ್ಥಿತರಿದ್ದರು.