ಬಿಜೆಪಿ ಸೇರ್ಪಡೆ ವಿಚಾರ: ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು ಹೀಗೆ...

ಸುಮಲತಾ ಅಂಬರೀಶ್
ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸೇರುವ ಕುರಿತಾದ ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯ ಜನರ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿ ಆಗಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೇನೆ. ಈಗ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಹೋಗಬೇಕು ಎಂದರೆ ಅದನ್ನು ಜಿಲ್ಲೆಯ ಜನರನ್ನು ಕೇಳಿ ತೀರ್ಮಾನ ಮಾಡಬೇಕು. ಅದು ಬಿಟ್ಟು ನಾನೇ ಸ್ವಂತ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಣೆ ನೀಡಿದರು.
‘ತಮ್ಮ ಸಹೋದರಿಯ ಪುತ್ರಿ ಮದುವೆಗೆ ಆಮಂತ್ರಣ ನೀಡಲು ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿಎಂ ಜೊತೆ ಸಮಾಲೋಚನೆ ನಡೆಸಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ಆಗುತ್ತಿದೆ. ನನ್ನ ಜಿಲ್ಲೆಗೆ ಏನೇನು ಅಭಿವೃದ್ಧಿ ತರಬಹುದು ಎಂಬುದಷ್ಟೇ ನನ್ನ ಯೋಚನೆ ಎಂದು ಅವರು ಹೇಳಿದರು.
ಜಿಲ್ಲೆಯ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಇದು ಬಿಟ್ಟರೆ ಬೇರೆ ರಾಜಕೀಯ ವಿಷಯದ ಚರ್ಚೆ ಮಾಡಿಲ್ಲ. ಯಾವುದೇ ಪಕ್ಷ ಸೇರುವುದಕ್ಕೆ ಮಂಡ್ಯದ ಜನರು ಹೇಳಬೇಕೆ ಹೊರತು ನಾನಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಆಗದು. ಅಭಿಷೇಕ್ ಅಂಬರೀಶ್ ಸ್ಪರ್ಧೆ ಬಗ್ಗೆ ಜನರ ಒತ್ತಡ ಇದೆ. ಅವನು ಹೋದ ಕಡೆಯಲ್ಲೆಲ್ಲ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಅದು ಅಭಿಷೇಕ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.







