ಇಸ್ರೇಲಿ ಸ್ಪೈವೇರ್ ಬಳಸಿ ಯುರೋಪಿಯನ್ ಯೂನಿಯನ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿತ್ತು: ವರದಿ

ಬ್ರಸ್ಸೆಲ್ಸ್ : ಇಸ್ರೇಲಿ ಗೂಢಚರ್ಯೆ ಸಂಸ್ಥೆಯೊಂದು ವಿನ್ಯಾಸಗೊಳಿಸಿದ ಸ್ಪೈವೇರ್ ಬಳಸಿ ಯುರೋಪಿಯನ್ ಕಮಿಷನ್‍ನ ಹಿರಿಯ ಅಧಿಕಾರಿಗಳನ್ನು ಕಳೆದ ವರ್ಷ ಟಾರ್ಗೆಟ್ ಮಾಡಲಾಗಿತ್ತು ಎಂದು ವರದಿಯೊಂದು ಹೇಳಿದೆ.
2019ರಿಂದ ಯುರೋಪಿಯನ್ ಜಸ್ಟಿಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಬೆಲ್ಜಿಯಂ ಅಧಿಕಾರಿ ಡಿಡಿಯರ್ ರೆಂಡರ್ಸ್ ಅವರನ್ನೂ ಈ ಗೂಢಚರ್ಯೆ ಸಾಫ್ಟ್‍ವೇರ್ ಬಳಸಿ ಟಾರ್ಗೆಟ್ ಮಾಡಲಾಗಿತ್ತು, ಇವರ ಹೊರತಾಗಿ ಯುರೋಪಿಯನ್ ಕಮಿಷನ್‍ನ ಕನಿಷ್ಠ ನಾಲ್ಕು ಇತರ ಸಿಬ್ಬಂದಿಯನ್ನೂ ಟಾರ್ಗೆಟ್ ಮಾಡಲಾಗಿತ್ತೆಮದು ವರದಿ ಹೇಳಿದೆ.
ಸರಕಾರ ಪ್ರವರ್ತಿತ ದಾಳಿಕೋರರಿಂದ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ತನ್ನ ಐಫೋನ್ ಬಳಕೆದಾರರಿಗೆ ಆಪಲ್ ಸಂಸ್ಥೆ ಕಳೆದ ನವೆಂಬರ್ ತಿಂಗಳಿನಲ್ಲಿ ಎಚ್ಚರಿಕೆ ನೀಡಿದ ನಂತರ ಈ ವಿಚಾರ ಬೆಳಕಿಗೆ ಬಂದಿತ್ತು.
ಆದರೆ ಈ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲು ಸ್ಪೈವೇರ್ ಅನ್ನು ಯಾರು ಬಳಸಿದ್ದರೆಂದು ಇನ್ನೂ ಸ್ಪಷ್ಟವಾಗಿಲ್ಲ. ಯುರೋಪಿಯನ್ ಯೂನಿಯನ್ ವಕ್ತಾರ ಜೊಹಾನೆಸ್ ಬಹರ್ಕೆ ಹಾಗೂ ಆಪಲ್ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಫೆಬ್ರವರಿ 2021ರಿಂದ ಸೆಪ್ಟೆಂಬರ್ 2021ರ ನಡುವೆ ಇಸ್ರೇಲಿ ಎನ್‍ಎಸ್‍ಒ ಗ್ರೂಪ್ ವಿನ್ಯಾಸಗೊಳಿಸಿದ ಅತ್ಯಾಧುನಿಕ ಸಾಫ್ಟ್‍ವೇರ್ ಫೋಸ್ರ್ಡ್‍ಎಂಟ್ರಿ ಬಳಸಿ ಟಾರ್ಗೆಟ್ ಮಾಡಲಾಗಿತ್ತು ಹಾಗೂ ಈ ಮೂಲಕ ಸಂಬಂಧಿತರ ಐಫೋನ್‍ಗಳ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು ಎನ್ನಲಾಗಿದೆ.
ಆದರೆ ಈ ಹ್ಯಾಕಿಂಗ್ ಯತ್ನಗಳಿಗೆ ತಾನು ಕಾರಣವಲ್ಲ ಎಂದು ಎನ್‍ಎಸ್‍ಒ ಹೇಳಿದೆ.







