ಆರಗ ಜ್ಞಾನೇಂದ್ರಗೆ ಗಾಂಜಾ ಅಭ್ಯಾಸವಿರಬೇಕು: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಎ.11:ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಹೆಂಡ, ಗಾಂಜಾ ಕುಡಿಯುವ ಅಭ್ಯಾಸ ಇರಬೇಕು.ಹೀಗಾಗಿ ತಪ್ಪು ಹೇಳಿಕೆ ನೀಡುತ್ತಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಸೋಮವಾರ ಫ್ರೀಡಂ ಪಾರ್ಕ್ ಮೈದಾನದಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಇಂಧನ ಹಾಗೂ ಅಗತ್ಯ ವಸ್ತುಗಳ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ದುರ್ಘಟನೆ, ಕೋಮು ಸಂಘರ್ಷಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೇರ ಉತ್ತರ ಕೊಡಲು ಆಗುತ್ತಿಲ್ಲ. ಅವರ ಸಂಪುಟದಲ್ಲಿರುವ ಅರೆ ಜ್ಞಾನ ಇರುವ ಅರಗ ಜ್ಞಾನೇಂದ್ರ ಗೃಹ ಮಂತ್ರಿ ಯಾವ ಹೇಳಿಕೆ ನೀಡುತ್ತಾರೆ ಗೊತ್ತಿಲ್ಲ. ಇನ್ನೂ, ಅವರಿಗೆ ಹೆಂಡ, ಗಾಂಜಾ ಕುಡಿಯುವ ಅಭ್ಯಾಸ ಇರಬೇಕು, ಹೀಗಾಗಿ ಆ ರೀತಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯದ ಕುವೆಂಪು, ಬಸವಣ್ಣ, ಶಿಶುನಾಳ ಶರೀಫರು, ದಾ.ರಾ ಬೇಂದ್ರೇ, ಗಂಗೂಬಾಯಿ, ಭೀಮಸೇನ ಜೋಷಿ, ಚಂಪಾಯಂತಹ ಮಹಾತ್ಮರು ಕೋಮುಸ್ವಾರಸ್ಯವನ್ನು ಹರಿಸಿ ಹೋಗಿದ್ದಾರೆ. ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಆದರೆ ಬಿಜೆಪಿ ಇವರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಎಷ್ಟು ಜನ ವಿದ್ವಾಂಸರು, ಸಾಹಿತಿಗಳು ಕಣವಿ, ಚಂಪಾ, ರಾಜಗುರು, ಪಾಟೀಲ ಪುಟ್ಟಪ್ಪ, ಕಾರ್ನಾಡರು, ಪಂಚಾಕ್ಷರಿ ಗವಿಗಳು ನಾಡಿನ ಸೌಹಾರ್ದತೆಗೆ ಶ್ರಮಿಸಿದವರು ಎಂದು ನುಡಿದರು.
ನಿನ್ನೆ ಧಾರವಾಡದಲ್ಲಿ ನಡೆದ ಘಟನೆ ಇಡೀ ರಾಜ್ಯದ ಜನತೆ ತಲೆತಗ್ಗಿಸಬಹುದುಬಡ ವ್ಯಾಪಾರಿ ತನ್ನ ಹೊಟ್ಟೆಪಾಡಿಗೆ ವ್ಯಾಪಾರ ಮಾಡುವಾಗ ದಾಳಿ ಮಾಡುತ್ತಾರೆ ಎಂದರೆ ಇವರು ಯಾವ ಶೂರರು ಎಂದ ಅವರು, ಮಹಿಳೆಯರು, ಬೆಲೆ ಏರಿಕೆ, ಶಾಲಾ ಮಕ್ಕಳ ಮೇಲಿನ ದೌರ್ಜನ್ಯ ವಿಚಾರವಾಗಿ ಇವೆಲ್ಲಕ್ಕೂ ಉತ್ತರ ನೀಡಲು ಸಾಧ್ಯವಾಗದ ಕೆಲಸಕ್ಕೆ ಬಾರದ ಸರಕಾರ ಇದ್ದರೆ ಅದು ಬಿಜೆಪಿ ಸರಕಾರ ಎಂದು ಆಕ್ರೋಶ ಹೊರಹಾಕಿದರು.







