ಮುತಾಲಿಕ್ ಹೋರಾಟದ ಲಾಭ ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ಹೆಗ್ಡೆಗೆ ಸೇರಿದೆ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಎ.11: ಶ್ರೀರಾಮಸೇನಾ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಹೋರಾಟದ ಲಾಭವನ್ನು ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ಹೆಗ್ಡೆ ಪಡೆದಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಸೋಮವಾರ ಫ್ರೀಡಂ ಪಾರ್ಕ್ ಮೈದಾನದಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಇಂಧನ ಹಾಗೂ ಅಗತ್ಯ ವಸ್ತುಗಳ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುತಾಲಿಕ್, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಲಭೆ ಮಾಡಿದ ವ್ಯಕ್ತಿ, ಅದರ ಲಾಭ ಪಡೆದು ಮಂತ್ರಿಯಾಗಿರುವುದು ಪ್ರಹ್ಲಾದ್ ಜೋಷಿ. ಮುತಾಲಿಕ್ ನಿನಗೆ ಏನು ಆಗುವುದಿಲ್ಲ. ಅವರನ್ನು ಉಪಯೋಗಿಸಿಕೊಂಡ ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡದಲ್ಲಿ ಸಂಸದರಾಗಿ ಹೋಗಿದ್ದಾರೆ ಎಂದು ಟೀಕಿಸಿದರು.
ಮುತಾಲಿಕ್ ಇದೇ ರೀತಿ ಮಾತನಾಡುತ್ತಿದ್ದರೆ ಬಿಜೆಪಿಯವರೇ ನಿಮ್ಮನ್ನು ಜೈಲಿಗೆ ಹಾಕುವ ದಿನ ದೂರ ಉಳಿದಿಲ್ಲ. ಅವರನ್ನು ನಂಬಿ ಏನನ್ನೂ ಮಾಡಬೇಡಿ.ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂತಿಲ್ಲ. ಯಾವುದೇ ವಿಚಾರ ಬರಲಿ, ಸಂವಿಧಾನಕ್ಕೆ ಧಕ್ಕೆಯಾಗುವುದಾದರೆ ತೀವ್ರವಾಗಿ ಎದುರಿಸುತ್ತೇವೆ ಎಂದು ಅವರು ತಿಳಿಸಿದರು.





