ಬೆಳ್ತಂಗಡಿ: ವಿದ್ಯಾರ್ಥಿನಿಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆತಂದು ಪರೀಕ್ಷೆ ಬರೆಸಿದ ಶಾಲಾ ಆಡಳಿತ ಮಂಡಳಿ
ಪರೀಕ್ಷೆ ಬರೆಯಲು ತಾಯಿ ಜೊತೆ ಹೋಗುತ್ತಿದ್ದಾಗ ಅಪಘಾತ

ಬೆಳ್ತಂಗಡಿ : ಎಸೆಸೆಲ್ಸಿ ಪರೀಕ್ಷೆ ಬರೆಯಲು ತಾಯಿ ಜೊತೆ ಹೋಗುತ್ತಿದ್ದಾಗ ಅಪಘಾತವಾಗಿ ವಿದ್ಯಾರ್ಥಿನಿ ಗಾಯಗೊಂಡಿದ್ದು, ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆತಂದ ಶಾಲಾ ಆಡಳಿತ ಮಂಡಳಿ ಪರೀಕ್ಷೆ ಬರೆಯಲು ಸಹಕಾರಿಯಾಗಿದೆ.
ಎಸೆಸೆಲ್ಸಿ ವಿದ್ಯಾರ್ಥಿಗಳ ಕೊನೆಯ ವಿಜ್ಞಾನ ಪರೀಕ್ಷೆಯಾಗಿರುವ ಇಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಾವೂರು ಗ್ರಾಮದ ಸಂಪಿಂಜಾ ನಿವಾಸಿ ಲಕ್ಷ್ಮಣ -ಮಮತಾ ದಂಪತಿಯ ಪುತ್ರಿ ತನ್ವಿ(15) ಇಂದು ಪರೀಕ್ಷೆ ಬರೆಯಲು ತನ್ನ ತಾಯಿ ಮಮತಾ ಜೊತೆ ಸ್ಕೂಟರ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದಾಗ ಬೆಳ್ತಂಗಡಿಯ ಲಾಯಿಲ ಸಮೀಪ ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿದೆ. ಈ ವೇಳೆ ತನ್ವಿಗೆ ಗಾಯವಾಗಿದ್ದು ತಕ್ಷಣ ಉಜಿರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಬಳಿಕ ತಾಯಿ ತನ್ನ ಮಗಳ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ಬಂದ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ವಿಚಾರಿಸಿ ನಂತರ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವುದರಿಂದ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ದಾಖಲೆಗಳನ್ನು ನೀಡಿ, ತನ್ವಿ ಹೇಳಿದಂತೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜಿನ ಪರೀಕ್ಷಾ ಮೇಲ್ವಿಚಾರರಿಗೆ ಮನವಿ ಮಾಡಿದ ಮೇರೆಗೆ 11:45 ರಿಂದ 2:45 ವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.
ಉಜಿರೆ ಬೆನಕ ಆಸ್ಪತ್ರೆಯ ಮುಖಸ್ಥರಾದ ಡಾ. ಗೋಪಾಲಕೃಷ್ಣ ತಮ್ಮ ಆಸ್ಪತ್ರೆಯ ಆ್ಯಂಬುಲೆನ್ಸ್ ನೀಡಿ ಅದರಲ್ಲಿ ಸಿಬ್ಬಂದಿಯನ್ನು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಜೊತೆ ನೋಡಿಕೊಳ್ಳಲು ಕಳುಹಿಸಿದ್ದು, ಬೆಳಿಗ್ಗೆ 11:45 ರಿಂದ 2:45 ಗಂಟೆವರೆಗೆ ನರ್ಸ್ ಮತ್ತು ಆ್ಯಂಬುಲೆನ್ಸ್ ಇದ್ದು ಪರೀಕ್ಷೆ ಮುಗಿದ ಬಳಿಕ ವಾಪಸ್ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರಿಸಿದ್ದಾರೆ.
ತನ್ವಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಅಲ್ಲದೆ ಎಸೆಸೆಲ್ಸಿ ಕೊನೆಯ ಪರೀಕ್ಷೆ ಅಗಿರುವ ಕಾರಣ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾನಾಡಿ, 9ನೇ ತರಗತಿಯ ವಿದ್ಯಾರ್ಥಿನಿಯ ಮೂಲಕ ತನ್ವಿ ಸ್ಟಚ್ಚರ್ ನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಮಲಗಿಕೊಂಡು ಆಕೆ ಹೇಳಿದ ಹಾಗೆ ಪಕ್ಕದಲ್ಲಿ ಕುಳಿತುಕೊಂಡು 9ನೆ ತರಗತಿಯ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮುಗಿಸಿದ್ದಾರೆ ಎಂದು ಸೈಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.