ಮೇ 1ರಂದು ಲಾರಿ ಮುಷ್ಕರಕ್ಕೆ ಕರೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.11: ಸರಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಲಾರಿ ಮಾಲಕರು ಬೀದಿಪಾಲಾಗುತ್ತಿದ್ದಾರೆ. ಸರಕು ಸಾಗಾಣಿಕಾ ಉದ್ಯಮವು ಸಂಕಷ್ಟದಲ್ಲಿದೆ. ಹಾಗಾಗಿ ಎ.30ರೊಳಗೆ ಸರಕಾರವು ತನ್ನ ಅವೈಜ್ಞಾನಿಕ ನೀತಿಯನ್ನು ಕೈಬಿಡದಿದ್ದರೆ, ಮೇ 1ರಿಂದ ಸ್ಥಳೀಯ ಲಾರಿ ಸರಕು ಸಾಗಾಟವನ್ನು ನಿಲ್ಲಿಸಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಪೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಸಿ. ನಂದೀಶ್ ರೆಡ್ಡಿ ಮಾತನಾಡಿ, ಸರಕಾರವು ಎ.1ರಿಂದ ಫಿಟ್ ನೆಸ್ ಸರ್ಟಿಫಿಕೆಟ್ ಶುಲ್ಕವನ್ನು 16 ಪಟ್ಟು ಹೆಚ್ಚಳ ಮಾಡಿರುವುದು ಬಡ ಲಾರಿ ಮಾಲಕರ ಮೇಲೆ ಪ್ರಹಾರ ಮಾಡಿದಂತಾಗಿದೆ. ಹಳೆಯ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಅವಧಿಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ ಎಂದರು.
ಕೇಂದ್ರ ಸರಕಾರವು ಯಾರದ್ದೋ ಒತ್ತಡಕ್ಕೆ ಮಣಿದು ರಸ್ತೆ ಸರಕು ಸಾಗಾಣಿಕೆ ವಾಹನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ವಿಧಿಸುತ್ತಿದ್ದ ದಂಡವು 100 ರೂ.ಯಿಂದ 500 ರೂ.ವರೆಗೆ ಇದ್ದಿತು. ಈ ದಂಡವನ್ನು ಕೇಂದ್ರ ಸರಕಾರವು ಕನಿಷ್ಠ 5,000 ರೂ.ಯಿಂದ 25,000 ರೂ.ವರೆಗೆ ಏರಿಸಿದ್ದಾರೆ. ಇದನ್ನು ಮೋಟಾರು ವಾಹನ ಇಲಾಖಾ ಆಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ನ ಚೆನ್ನಾರೆಡ್ಡಿ, ಸಾಯಿರಾಮ್, ಪಾಂಡಿಯನ್ ಮತ್ತು ಚಂದ್ರಶೇಖರ್ ಉಪಸ್ಥಿತರಿದ್ದರು.







