VIDEO- ಮೈಸೂರು: ಕಲ್ಲಂಗಡಿ ವ್ಯಾಪಾರಿ ನಬೀಸಾಬ್ ರಿಗೆ ನೀಡಲು ದೇಣಿಗೆ ಸಂಗ್ರಹ
ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಸರಕಾರ ಹೊರಟಿದೆ: ಕೆ.ಎಸ್. ಶಿವರಾಮ್

ಮೈಸೂರು,ಎ.11: ಧಾರವಾಡದಲ್ಲಿ ಮುಸ್ಲಿಮ್ ವ್ಯಾಪಾರಿ ನಬೀಸಾಬ್ ಅವರ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸಗೊಳಿಸದ್ದನ್ನು ಖಂಡಿಸಿ ಹಾಗೂ ಹಣ್ಣಿನ ವ್ಯಾಪಾರಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹವನ್ನು ಕರ್ನಾಟಕ ರಾಜ್ಯ ಜನನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆಸಲಾಯಿತು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ನೇತೃತ್ವದಲ್ಲಿ ದೇಣಿಗೆ ಸಂಗ್ರಹ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಶಿವರಾಮ್, ಬಡ ಮುಸ್ಲಿಮ್ ವ್ಯಾಪಾರಿ ಮೇಲೆ ಹಲ್ಲೆ ನಡೆಸಿರುವುದು, ಅತ್ಯಂತ ಖಂಡನೀಯ ಮತ್ತು ಮಾನವಿಯ ಧರ್ಮಕ್ಕೆ ವಿರುದ್ಧವಾದುದು. ಸಾಮರಸ್ಯದಿಂದ ಕೂಡಿದ್ದ ಕರ್ನಾಟಕವನ್ನು ಶ್ರೀರಾಮ ಸೇನೆ ಸೇರಿದಂತೆ ಕೆಲವು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಇಂತಹ ಆತಂಕಕಾರಿ ಘಟನೆ ನಡೆದರೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮೌನವಹಿಸಿರುವುದನ್ನು ನೋಡಿದರೆ ಇದೊಂದು ಪ್ರಾಯೋಜಿತ ಹಲ್ಲೆ ಎಂಬುದು ಅರ್ಥವಾಗುತ್ತಿದೆ.ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ರಾಜ್ಯ ಸರ್ಕಾರ ಹೊರಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕೋಮುದ್ವೇಷವನ್ನು ಬಿತ್ತಲು ಹೊರಟಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯ ಸರ್ಕಾರದ ದುರಾಡಳಿತವನ್ನು ಮನಗಂಡು ರಾಷ್ಟ್ರಪತಿಗಳು ರಾಜ್ಯಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಕ್ಕಿಂತ ಮಾನವ ಧರ್ಮ ಶ್ರೇಷ್ಠ ಧರ್ಮ ಹಾಗಾಗಿ ಎಲ್ಲಾ ಪ್ರಗತಿಪರರು, ರೈತ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಇತರೆ ಸಂಘಟನೆಗಳೊಡಗೂಡಿ ಕೋಮು ಸಂಘರ್ಷ ಮಾಡುವವರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸಲಾಗುವುದು ಎಂದು ಹೇಳಿದರು.
ಆರೆಸ್ಸೆಸ್, ಸಂಘಪರಿವಾರ ಮತ್ತು ಬಿಜೆಪಿ ಯವರು ಇದೇ ರೀತಿ ಸಂಘರ್ಷ ಉಂಟು ಮಾಡಲು ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಲೋಕೇಶ್ ಮಾದಾಪುರ, ಪ್ರಕಾಶ್, ಎನ್.ಆರ್.ನಾಗೇಶ್, ಶಂಭಯ್ಯ, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.






.jpeg)


