ಅಕ್ಷರ ದಾಸೋಹ ನೌಕರರಿಗೆ ಕಡ್ಡಾಯ ನಿವೃತ್ತಿ ಖಂಡಿಸಿ ಪ್ರತಿಭಟನೆ
ಮಂಗಳೂರು : 60 ವರ್ಷ ಪ್ರಾಯ ತುಂಬಿದ ಬಿಸಿಯೂಟ ನೌಕರಿಯ ಮಹಿಳೆಯರನ್ನು ಪಿಂಚಣಿ ನೀಡದೆ ಕಡ್ಡಾಯವಾಗಿ ಕೆಲಸದಿಂದ ಬಿಡುಗಡೆಗೊಳಿಸುವ ರಾಜ್ಯ ಸರಕಾರದ ನೀಡಿಯನ್ನು ಖಂಡಿಸಿ ಸೋಮವಾರ ದ.ಕ.ಜಿಪಂ ಕಚೇರಿಯ ಮುಂದೆ ಸಿಐಟಿಯು ಅಧೀನದ ಅಕ್ಷರದಾಸೋಹ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು ೫೦ ಲಕ್ಷ ಬಡ, ರೈತ, ಕೃಷಿ ಕೂಲಿಕಾರರ, ದೀನದಲಿತರ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಬಡಿಸುವುದರೊಟ್ಟಿಗೆ ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ತಾಯಂದಿರ ಪರಿಶ್ರಮವಿದೆ. ಆದರೆ ಸರಕಾರ ಅವರನ್ನು ಪಿಂಚಣಿ ನೀಡದೆ ಕಡ್ಡಾಯ ನಿವೃತ್ತಿಗೊಳಿಸಿದೆ. ಇದು ಖಂಡನೀಯ. ಸರಕಾರ ತಕ್ಷಣ ಕೆಲಸದಿಂದ ಕೈ ಬಿಡುವ ಬಿಸಿಯೂಟ ನೌಕರರಿಗೆ ಒಂದು ಲಕ್ಷ ರೂ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭವ್ಯಾ ಮಾತನಾಡಿ ೨೦೦೧-೨೦೦೨ ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡುವಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿ ಮಾಡಲಾಗಿತ್ತು. ಅದರಲ್ಲಿ ನಿವೃತ್ತಿ ವಯಸ್ಸನ್ನು ಸರಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರುವುದಿಲ್ಲ. ನಮ್ಮ ಸಂಘಟನೆಯು 2016ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಹಲವಾರು ಬಾರಿ ಸರಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರೂ ಸ್ಪಂದಿಸಿರಲಿಲ್ಲ. ಇದೀಗ ಯಾವುದೇ ಪಿಂಚಣಿ ನೀಡದೆ 60 ವರ್ಷ ಪ್ರಾಯದ ಅಡುಗೆಯಾಳುಗಳನ್ನು ಕೆಲಸದಿಂದ ಬಿಡುಗಡೆ ಮಾಡಿಸುತ್ತಿರುವುದು ಅನ್ಯಾಯ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಭವ್ಯಾ, ರತ್ನಮಾಲಾ, ಉಮಾವತಿ, ಲಲಿತಾ, ಮಾಲತಿ, ಶಾಲಿನಿ, ಅರುಣಾ ವಹಿಸಿದ್ದರು. ಸಂಘದ ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿದರು. ಜಯಶ್ರೀ ವಂದಿಸಿದರು.