ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ: ರಕ್ಷಣೆಗೆ ಕುಂ.ವೀರಭದ್ರಪ್ಪ ಮನವಿ

ಸಾಹಿತಿ ಕುಂ.ವೀರಭದ್ರಪ್ಪ
ವಿಜಯನಗರ: 'ನನ್ನ ಜೀವಕ್ಕೆ ಅಪಾಯವಿದ್ದು, ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ವಿಜಯನಗರ ಎಸ್.ಪಿ ಅವರಿಗೆ ಮನವಿ ಮಾಡಿದ್ದಾರೆ.
'ಸಹಿಷ್ಣು ಹಿಂದೂ' ಎಂಬ ಹೆಸರು ಮತ್ತು ವಿಳಾಸವಿಲ್ಲದ ಅನಾಮಧೇಯ ಜೀವ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಕುಂ.ವೀರಭದ್ರಪ್ಪ ಅವರು ಸೂಕ್ತ ರಕ್ಷಣೆ ನೀಡಬೇಕು ಎಂದು ಸೋಮವಾರ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ... ಕುಂ. ವೀರಭದ್ರಪ್ಪ, ಸಿದ್ದರಾಮಯ್ಯ, ಎಚ್ಡಿಕೆ ಸಹಿತ 61 ಮಂದಿಗೆ ಕೊಲೆ ಬೆದರಿಕೆ
'61ಕ್ಕೂ ಹೆಚ್ಚು ಮಂದಿ ಸಾಹಿತಿಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸರ್ವನಾಶದ ಹಾದಿಯಲ್ಲಿ ಇದ್ದೀರಿ, ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕಾಗಿ ಸಿದ್ಧರಾಗಿ. ದೇಶದ್ರೋಹಿ ಬುದ್ಧಿಜೀವಿಗಳೇ ಕುಂ.ವೀರಭದ್ರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ಸಿದ್ಧರಾಗಿ, ಸಿದ್ಧರಾಗಿ. ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಅಂತಿಮ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ' ಎಂದು ವೀರಭದ್ರಪ್ಪ ಅವರ ಕೊಟ್ಟೂರಿನಲ್ಲಿರುವ ಮನೆಗೆ ಏ. 7ರಂದು ಎರಡು ಪುಟಗಳ ಪತ್ರ ಬಂದಿತ್ತು.
‘ ಸಾಹಿತಿಗಳ ಕೊಲೆ ಬೆದರಿಕೆಯ ಪತ್ರವನ್ನು ಪರಿಶೀಲಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭದ್ರತೆಗೆ ಸಂಬಂಧಿಸಿದಂತೆ ಈಗಾಗಲೇ ಕೊಟ್ಟೂರು ಠಾಣೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ’
- ಡಾ. ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- ವಿಜಯನಗರ







