ಐಪಿಎಲ್: ಗುಜರಾತ್ ಟೈಟಾನ್ಸ್ ಕೆಡವಿದ ಹೈದರಾಬಾದ್
ವಿಲಿಯಮ್ಸನ್ ಅರ್ಧಶತಕ

Photo: twitter
ನವಿ ಮುಂಬೈ, ಎ.11: ನಾಯಕ ಕೇನ್ ವಿಲಿಯಮ್ಸನ್ ಗಳಿಸಿದ ಅಕರ್ಷಕ ಅರ್ಧಶತಕದ ಸಹಾಯದಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನ 21ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿತು.
ಇಲ್ಲಿನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 163 ರನ್ ಗುರಿ ಪಡೆದ ಹೈದರಾಬಾದ್ 19.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ವಿಲಿಯಮ್ಸನ್(57 ರನ್, 46 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮಾ(42 ರನ್, 32 ಎಸೆತ, 6 ಬೌಂಡರಿ)ಮೊದಲ ವಿಕೆಟ್ಗೆ 64 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ರಶೀದ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದರು.
ರಾಹುಲ್ ತ್ರಿಪಾಠಿ(17 ರನ್)ಗಾಯಗೊಂಡು ನಿವೃತ್ತಿಯಾದರು. ನಿಕೊಲಸ್ ಪೂರನ್(ಔಟಾಗದೆ 34 ರನ್,18 ಎಸೆತ) ಹಾಗೂ ಮರ್ಕ್ರಾಮ್ (ಔಟಾಗದೆ 12, 8 ಎಸೆತ)ಗೆಲುವಿನ ವಿಧಿ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಗುಜರಾತ್ ತಂಡ ಹಾರ್ದಿಕ್ ಪಾಂಡ್ಯ(ಔಟಾಗದೆ 50 ರನ್)ಹಾಗೂ ಅಭಿನವ್ ಮನೋಹರ್(35 ರನ್)ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಆರಂಭಿಕ ಬ್ಯಾಟರ್ಗಳಾದ ಶುಭಮನ್ ಗಿಲ್(7 ರನ್) ಹಾಗೂ ಮ್ಯಾಥ್ಯೂ ವೇಡ್(19 ರನ್) ಗುಜರಾತ್ಗೆ ಬಿರುಸಿನ ಆರಂಭ ನೀಡಿದರು. ಆದರೆ, ಭುವನೇಶ್ವರ ಕುಮಾರ್ ಅವರು ಗಿಲ್ ವಿಕೆಟನ್ನು ಕಬಳಿಸಿ ಮೊದಲ ವಿಕೆಟ್ ಜೊತೆಯಾಟವನ್ನು 24 ರನ್ಗೆ ಸೀಮಿತಗೊಳಿಸಿದರು. ಆ ನಂತರ ಸಾಯಿ ಸುದರ್ಶನ್(11 ರನ್) ಹಾಗೂ ವೇಡ್ ಅವರನ್ನು ಕ್ರಮವಾಗಿ ಟಿ.ನಟರಾಜನ್ ಹಾಗೂ ಉಮ್ರಾನ್ ಮಲಿಕ್ ಪೆವಿಲಿಯನ್ಗೆ ಅಟ್ಟಿದರು.
ಗುಜರಾತ್ ಮೊದಲ 8 ಓವರ್ನೊಳಗೆ 3 ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ನಾಲ್ಕನೇ ವಿಕೆಟ್ಗೆ 40 ರನ್ ಜೊತೆಯಾಟ ನಡೆಸಿದ ಡೇವಿಡ್ಮಿಲ್ಲರ್(12 ರನ್) ಹಾಗೂ ಹಾರ್ದಿಕ್ ಪಾಂಡ್ಯ (ಔಟಾಗದೆ 50, 42 ಎಸೆತ, 4 ಬೌಂಡರಿ, 1 ಸಿಕ್ಸರ್) ತಂಡವನ್ನು ಆಧರಿಸಿದರು. ಮಿಲ್ಲರ್ ಔಟಾದ ಬಳಿಕ ಮನೋಹರ್(35 ರನ್, 21 ಎಸೆತ, 5 ಬೌಂಡರಿ, 1 ಸಿಕ್ಸರ್) ಜೊತೆ ಕೈಜೋಡಿಸಿದ ನಾಯಕ ಪಾಂಡ್ಯ 5ನೇ ವಿಕೆಟ್ಗೆ ಇನ್ನೂ 50 ರನ್ ಸೇರಿಸಿ ತಂಡದ ಮೊತ್ತವನ್ನು 162ಕ್ಕೆ ತಲುಪಿಸಿದರು.
ಹೈದರಾಬಾದ್ ಪರ ಟಿ.ನಟರಾಜನ್(2-34) ಹಾಗೂ ಭುವನೇಶ್ವರ ಕುಮಾರ್(2-37) ತಲಾ ಎರಡು ವಿಕೆಟ್ಗಳನ್ನು ಪಡೆದರು.







