ನಿರುದ್ಯೋಗ?: ರೈಲ್ವೆಯಲ್ಲಿ ಎರಡು ಲಕ್ಷ ಹುದ್ದೆಗಳು ಈಗಲೂ ಖಾಲಿಯೇ ಇವೆ!

Photo: PTI
ಹೊಸದಿಲ್ಲಿ,ಎ.11: ನಿರುದ್ಯೋಗ ಸಮಸ್ಯೆಯು ಕೇಂದ್ರಬಿಂದುವಾಗಿರುವ ಈ ಸಮಯದಲ್ಲಿ ಭಾರತೀಯ ರೈಲ್ವೆಯ 68 ವಿಭಾಗಗಳಲ್ಲಿ ಹಲವಾರು ವರ್ಷಗಳಿಂದಲೂ ಎರಡು ಲಕ್ಷಕ್ಕೂ ಅಧಿಕ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳು ಖಾಲಿಯಾಗಿಯೇ ಉಳಿದುಕೊಂಡಿವೆ ಎಂಬ ಸುದ್ದಿಯು ಹೊರಬಿದ್ದಿದೆ.
ನಿಖರವಾಗಿ ಹೇಳುವುದಾದರೆ ತಾಂತ್ರಿಕ ಸುರಕ್ಷತೆ ಮತ್ತು ತಾಂತ್ರಿಕೇತರ ವರ್ಗಗಳಲ್ಲಿ 2,02,652 ಹುದ್ದೆಗಳು ಈಗಲೂ ಭರ್ತಿಯಾಗದೇ ಉಳಿದಿವೆ.
ಮಾಧ್ಯಮಗಳಿಗೆ ಲಭ್ಯವಾಗಿರುವ ಅಧಿಕೃತ ಮಾಹಿತಿಗಳಂತೆ ಉತ್ತರ ರೈಲ್ವೆ ವಲಯದಡಿ ದಿಲ್ಲಿ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ (6,101) ಹುದ್ದೆಗಳು ಖಾಲಿಯಿವೆ. ನಂತರದ ಸ್ಥಾನಗಳಲ್ಲಿ ಮುಂಬೈ ವಿಭಾಗ (5,670),ಪ್ರಯಾಗರಾಜ್ ವಿಭಾಗ (4,268),ಪ.ಬಂಗಾಳದ ಸಿಯಾಲ್ಡಾ ವಿಭಾಗ (3,407),ಚೆನ್ನೈ ವಿಭಾಗ (3,268),ಬಿಲಾಸಪುರ ವಿಭಾಗ (2,922),ಫಿರೋಜ್ಪುರ ವಿಭಾಗ (3,231) ಮತ್ತು ಹೌರಾ ವಿಭಾಗ (2,328)ಗಳು ಇವೆ.
ಸುರಕ್ಷೆ ಮತ್ತು ತಾಂತ್ರಿಕ ವರ್ಗಗಳಲ್ಲಿ ಮಂಜೂರಾಗಿರುವ ಒಟ್ಟು 6,28,200 ಹುದ್ದೆಗಳ ಪೈಕಿ 1,11,003 ಹುದ್ದೆಗಳು ಮತ್ತು ತಾಂತ್ರಿಕೇತರ ವರ್ಗಗಳಲ್ಲಿ ಒಟ್ಟು ಮಂಜೂರಾಗಿರುವ 4,52,825 ಹುದ್ದೆಗಳ ಪೈಕಿ 91,649 ಹುದ್ದೆಗಳು ಖಾಲಿಯಾಗಿ ಉಳಿದುಕೊಂಡಿವೆ.
ಇತ್ತೀಚಿಗೆ ರಾಜ್ಯಸಭೆಯಲ್ಲಿ ನೀಡಿದ್ದ ಲಿಖಿತ ಉತ್ತರವೊಂದರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹುದ್ದೆಗಳು ಖಾಲಿಯಿರುವುದನ್ನು ಒಪ್ಪಿಕೊಂಡಿದ್ದರು. ವಿಶೇಷವಾಗಿ ಸುರಕ್ಷೆ ಮತ್ತು ತಾಂತ್ರಿಕ ವರ್ಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ವಲಯ ರೈಲ್ವೆ ಕಚೇರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.







