ಶಿಕ್ಷಣ ಮತ್ತು ಸಂಶೋದನೆ ನಡುವಿನ ಅಂತರವನ್ನು ಎನ್‍ಇಪಿ ಕುಗ್ಗಿಸುತ್ತದೆ: ಡಾ.ಸಿ.ಎನ್. ಅಶ್ವತ್ಥ ನಾರಾಯಣ

ಬೆಂಗಳೂರು, ಎ.11: ರಾಜ್ಯದ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಯಾಗಿದ್ದು, ಶಿಕ್ಷಣ ಮತ್ತು ಸಂಶೋಧನೆ ನಡುವಿನ ಅಂತರ ತಗ್ಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಭರವಸೆ ವ್ಯಕ್ತಪಡಿಸಿದರು.
ಸೋಮವಾರ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಪೂರ್ಣವಾಗಿ ಎನ್‍ಇಪಿ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಎನ್‍ಇಪಿಯನ್ನು ಅಳವಡಿಸಿಕೊಂಡ ರಾಜ್ಯಗಳಲ್ಲಿ ಮೊದಲ ರಾಜ್ಯವಾಗಿದೆ. ಹಾಗೆಯೇ ಎಲ್ಲಾ ವಿಶ್ವವಿದ್ಯಾಲಯಗಳನ್ನು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಗೆ ಅಳವಡಿಸಲಾಗುತ್ತಿದೆ ಎಂದರು.
ಶಿಕ್ಷಣವೇ ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿಗೆ ಆಧಾರವಾಗಿದೆ. ಜ್ಞಾನದ ಬಗ್ಗೆ ಹೆಚ್ಚು ಕಾಳಜಿ ವಹಿಸುವಾಗ ಪ್ರಗತಿ ವಿಚಾರದತ್ತ ಸಾಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ನಗರ ವಿವಿಗೆ ಬಹಳಷ್ಟು ಸವಾಲುಗಳು ಮತ್ತು ಜವಾಬ್ದಾರಿಗಳು ಇವೆ ಎಂದು ಅವರು ಹೇಳಿದರು.
ಇತ್ತೀಚಿಗೆ ಬೆಂಗಳೂರು ನಗರ ವಿವಿಯಾಗಿರುವ ಈ ಸೆಂಟ್ರಲ್ ಕಾಲೇಜಿಗೆ 165 ವರ್ಷಗಳ ಇತಿಹಾಸವಿದೆ. ಅದು ವಿಶ್ವ ಮನ್ನಣೆ ಗಳಿಸಿತ್ತು. ಅದರಂತೆ ಈ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಎಂ.ಆರ್. ಜೈಶಂಕರ್, ನಟ ರವಿಚಂದ್ರನ್, ಡಾ. ಸತ್ಯನಾರಾಯಣ ಅವರಿಗೆ ಬೆಂಗಳೂರು ನಗರ ವಿವಿ ವತಿಯಿಂದ ಗೌರವ ಡಾಕ್ಟರೇಟ್ ಹಾಗೂ 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿದರು.
ಪದ್ಮವಿಭೂಷಣ ಡಾ. ಕೆ.ಕಸ್ತೂರಿರಂಗನ್, ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಕುಲಸಚಿವ ಸಿ.ಎನ್. ಶ್ರೀಧರ್, ಬಿ.ರಮೇಶ್ ಮತ್ತು ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
ಮುಂದಿನ ದಶಕದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಶೇ.50ರಷ್ಟು ಜನ 35 ವರ್ಷದವರಿಗಿಂತ ಕೆಳಗಿನವರಾಗಿರುತ್ತಾರೆ. ಈ ಯುವಜನರು ಜಾಗತೀಕರಣದ ಅತಿ ಹೆಚ್ಚು ಪ್ರಯೋಜನವನ್ನು ತಮ್ಮದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಗುಣಮಟ್ಟದ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಸರಕಾರವು ಪ್ರಯತ್ನಿಸಬೇಕು. ಇದರಿಂದ ಜ್ಞಾನಾಧಾರಿತ ಸಮಾಜ ಮತ್ತು ಆರ್ಥಿಕತೆಗೆ ಅಗತ್ಯ ಬೇಡಿಕೆಗಳನ್ನು ಪೂರೈಸಲು ಸಹಕಾರಿಯಾಗಲಿದೆ.
-ಡಾ.ಕೆ. ಕಸ್ತೂರಿರಂಗನ್, ಎನ್‍ಇಪಿ ಕರಡು ಸಮಿತಿಯ ಅಧ್ಯಕ್ಷ







