ವಿ.ಕೆ.ಶಶಿಕಲಾಗೆ ಹಿನ್ನಡೆ: ಎಐಎಡಿಎಂಕೆ ಪ್ರ.ಕಾ.ಹುದ್ದೆಯಿಂದ ವಜಾವನ್ನು ಎತ್ತಿ ಹಿಡಿದ ಹೈಕೋರ್ಟ್
ಚೆನ್ನೈ,ಎ.11: 2016ರಲ್ಲಿ ಜೆ.ಜಯಲಲಿತಾ ನಿಧನದ ಬಳಿಕ ವಿ.ಕೆ.ಶಶಿಕಲಾ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದ ಇ.ಪಳನಿಸ್ವಾಮಿ ಮತ್ತು ಒ.ಪನ್ನೀರ್ಸೆಲ್ವಂ ಅವರ ನಿರ್ಧಾರವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಸೋಮವಾರ ಎತ್ತಿ ಹಿಡಿದಿದೆ.
2017,ಫೆಬ್ರವರಿಯಲ್ಲಿ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜೈಲು ಸೇರುವ ಮುನ್ನ ಒ.ಪನ್ನೀರ್ಸೆಲ್ವಂ ಅವರು ತಮಿಳುನಾಡಿನ ಬದಲಿ ಮುಖ್ಯಮಂತ್ರಿಯಾಗಿದ್ದಾಗ ಜಯಲಲಿತಾರ ನಿಧನದ ಬಳಿಕ ಶಶಿಕಲಾ ಎಐಎಡಿಎಂಕೆ ಪಕ್ಷದ ಪ್ರ.ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದರು.
ತನ್ನನ್ನು ಪ್ರ.ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಶಶಿಕಲಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವಂತೆ ಎಐಎಡಿಎಂಕೆ ಕೋರಿಕೊಂಡಿತ್ತು.
ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ,ತಾನು ಶೀಘ್ರವೇ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಪಕ್ಷದ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡ ಐದು ವರ್ಷಗಳ ಬಳಿಕ ಜಯಲಲಿತಾ ಹೊಂದಿದ್ದ ಸ್ಥಾನದ ಮೇಲೆ ಹಕ್ಕು ಸಾಧಿಸಲು ಶಶಿಕಲಾ ಪ್ರಯತ್ನಿಸುತ್ತಿದ್ದರೆ ಪನ್ನೀರ್ಸೆಲ್ವಂ ಸಂಚಾಲಕರಾಗಿ ಮತ್ತು ಪಳನಿಸ್ವಾಮಿ ಸಹಸಂಚಾಲಕರಾಗಿ ಪಕ್ಷದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ.





