ಅಲ್ಪಸಂಖ್ಯಾತರಿಗೆ ಕಿರುಕುಳ ನಿಲ್ಲಿಸುವಂತೆ ಕೋರಿ ಮನವಿ: ಕೇಂದ್ರ, ಅಸ್ಸಾಂನ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ. 11: ವಿದೇಶಿಯರು ಎಂದು ಹೇಳಲಾದವರನ್ನು ಪತ್ತೆಹಚ್ಚುವ ಹಾಗೂ ಗಡಿಪಾರು ಮಾಡುವ ನೆಪದಲ್ಲಿ ರಾಜ್ಯದಲ್ಲಿರುವ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ ಮನವಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಹಾಗೂ ಅಸ್ಸಾಂ ಸರಕಾರದಿಂದ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠ ನೋಟಿಸು ಜಾರಿ ಮಾಡಿತು ಹಾಗೂ ಅಸ್ಸಾಂ-ಎನ್ಆರ್ಸಿಗೆ ಆಧಾರ ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳ ಸಿಂಧುತ್ವಕ್ಕೆ ಸಂಬಂಧಿಸಿದ ಸಾಂವಿಧಾನ ಪೀಠದ ಮುಂದಿರುವ ಬಾಕಿ ಇರುವ 2015ರ ಪ್ರಕರಣ ವಿಲೇವಾರಿ ಆದ ಬಳಿಕ ಪಟ್ಟಿ ಮಾಡುವಂತೆ ನಿರ್ದೇಶಿಸಿತು.
‘‘ಉಲ್ಲೇಖ ಮಾಡಿದ ಹಿನ್ನೆಲೆಯಲ್ಲಿ ಉಲ್ಲೇಖದ ವಿಲೇವಾರಿ ಬಳಿಕ ರಿಟ್ ಅರ್ಜಿಯನ್ನು ಪಟ್ಟಿ ಮಾಡಿ’’ ಎಂದು ಪೀಠ ಹೇಳಿತು. ಅಸ್ಸಾಂ ಸಂಖ್ಯಾಲಘು ಸಂಗ್ರಾಮ ಪರಿಷದ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ, ಜನರು ಗಡಿ ದಾಟುತ್ತಿದ್ದಾರೆ ಎಂಬ ಮಾತಿದೆ, ಆದರೆ, ಕೆಲವೊಮ್ಮೆ ಗಡಿಗಳು ಕೂಡ ಜನರನ್ನು ದಾಟುತ್ತವೆ ಎಂದು ಹೇಳಿದರು. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯನ್ನು ಮರು ಪರಿಶೀಲನೆ ನಡೆಸುವಂತೆ ಕೋರಿ ಅಸ್ಸಾಂ ಎನ್ಆರ್ಸಿ ಸಂಯೋಜಕ ಮನವಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. 2019 ಆಗಸ್ಟ್ 31ರ ದಿನಾಂಕದ ಅಸ್ಸಾಂನ ಎನ್ಆರ್ಸಿ ಅಂತಿಮ ಪಟ್ಟಿಯಿಂದ ಯಾವುದೇ ವ್ಯಕ್ತಿಯ ಹೆಸರನ್ನು ಅಧಿಕಾರಿಗಳು ಅಳಿಸುವುದು ಹಾಗೂ ಹೊರತುಪಡಿಸುವುದಕ್ಕೆ ನಿರ್ಬಂಧ ವಿಧಿಸುವಂತೆ ಕೂಡ ಮನವಿ ಕೋರಿದೆ ಎಂದು ಹೆಗ್ಡೆ ಹೇಳಿದ್ದಾರೆ.







