ದ್ವೇಷ, ಹಿಂಸಾಚಾರ ದೇಶವನ್ನು ದುರ್ಬಲಗೊಳಿಸುತ್ತದೆ, ಎಲ್ಲರೂ ಸಂಘಟಿತರಾಗಬೇಕು: ರಾಹುಲ್ ಗಾಂಧಿ

ಹೊಸದಿಲ್ಲಿ, ಎ. 11: ದ್ವೇಷ ಹಾಗೂ ಹಿಂಸಾಚಾರ ದೇಶವನ್ನು ದುರ್ಬಲಗೊಳಿಸುತ್ತದೆ. ಆದುದರಿಂದ ನ್ಯಾಯಪರ ಹಾಗೂ ಎಲ್ಲರನ್ನೂ ಒಳಗೊಂಡ ಭಾರತಕ್ಕಾಗಿ ನಾಗರಿಕರೆಲ್ಲರೂ ಸಂಘಟಿತರಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಗುಜರಾತ್ನ ಹಿಮ್ಮತ್ನಗರ್ ಹಾಗೂ ಖಂಭತ್ ನಗರಗಳಲ್ಲಿ ರಾಮನವಮಿಯ ಮೆರವಣಿಗೆಯ ಸಂದರ್ಭ ಕೋಮ ಹಿಂಸಾಚಾರ ಭುಗಿಲೆದ್ದು ಒಬ್ಬರು ಮೃತಪಟ್ಟ ಹಾಗೂ ಮಾಂಸಾಹಾರ ಪೂರೈಸಿದ ಕುರಿತಂತೆ ಜೆಎನ್ಯು ಕ್ಯಾಂಪಸ್ನಲ್ಲಿ ಹಿಂಸಾಚಾರ ಸಂಭವಿಸಿದ ಒಂದು ದಿನದ ಬಳಿಕ ಅವರ ಹೇಳಿಕೆ ಹೊರ ಬಿದ್ದಿದೆ.
‘‘ದ್ವೇಷ, ಹಿಂಸಾಚಾರ, ಹೊರಗಿಡುವುದು ನಮ್ಮ ಪ್ರೀತಿಯ ಭಾರತವನ್ನು ದುರ್ಬಲಗೊಳಿಸಿದೆ. ಪ್ರಗತಿಯ ಹಾದಿಗೆ ಭಾತೃತ್ವ, ಶಾಂತಿ ಹಾಗೂ ಸಾಮರಸ್ಯದ ಕಲ್ಲುಗಳನ್ನು ಜೋಡಿಸಲಾಗಿದೆ. ನ್ಯಾಯಪರ ಹಾಗೂ ಎಲ್ಲರನ್ನೂ ಒಳಗೊಳ್ಳುವ ಭಾರತಕ್ಕೆ ಸಂಘಟಿತರಾಗಿ’’ ಎಂದು ರಾಹುಲ್ ಗಾಂಧಿ ಅವರು ಟ್ವೀಟರ್ನಲ್ಲಿ ಹೇಳಿದ್ದಾರೆ. ರಾಮ ನವಮಿ ದಿನ ಬೋಜನ ಶಾಲೆಯಲ್ಲಿ ಮಾಂಸಾಹಾರಿ ಆಹಾರವನ್ನು ಪೂರೈಸಿದ ಆರೋಪದಲ್ಲಿ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕಾವೇರಿ ಹಾಸ್ಟೆಲ್ನಲ್ಲಿ ರವಿವಾರ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.
ಈ ಹಿಂಸಾಚಾರದಲ್ಲಿ 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಹಿಂಸಾಚಾರದ ಹಲವು ವೀಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಒಂದು ವೀಡಿಯೊದಲ್ಲಿ ವಿದ್ಯಾರ್ಥಿಯೋರ್ವನ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡು ಬಂದಿತ್ತು. ವೀಡಿಯೊದ ಅಧೀಕೃತತೆಯನ್ನು ಅಧಿಕಾರಿಗಳು ದೃಢಪಡಿಸಿಲ್ಲ.