ಜಗನ್ ಮೋಹನ್ ರೆಡ್ಡಿಯ ನೂತನ ಸಂಪುಟ ಪ್ರಮಾಣ: ಆಂಧ್ರಪ್ರದೇಶದಲ್ಲಿ ಪ್ರತಿಭಟನೆ
ಹೈದರಾಬಾದ್, ಎ. 11: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ನೂತನ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆಂಧ್ರಪ್ರದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ. ನೂತನ ತಂಡದಲ್ಲಿ ಸೇರ್ಪಡೆಯಾಗದ ಪ್ರಭಾವಶಾಲಿ ನಾಯಕರ ಬೆಂಬಲಿಗರು ತಮ್ಮ ಅಸಮಾಧಾನವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಹೊರ ಹಾಕಿದ್ದಾರೆ.
ಮೊದಲ ಮಹಿಳಾ ಹಾಗೂ ದಲಿತ ಸಚಿವೆಯಾಗಲಿದ್ದಾಳೆ ಎಂದು ಹೇಳಲಾದ ಎಂ. ಸುಚರಿತಾ ಅವರು ಸಂಪುಟದಲ್ಲಿ ತನ್ನನ್ನು ಉಳಿಸಿಕೊಳ್ಳದೇ ಇರುವುದಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತನ್ನ ರಾಜೀನಾಮೆ ಪತ್ರವನ್ನು ರಾಜ್ಯ ಸಭೆ ಸದಸ್ಯ ಮೋಪಿದೇವಿ ವೆಂಕಟರಮಣ ಅವರಿಗೆ ಹಸ್ತಾಂತರಿಸಿದ್ದಾರೆ. ‘‘ಅವರು ವೈಎಸ್ಆರ್ ಕಾಂಗ್ರೆಸ್ನಲ್ಲಿ ಮುಂದುವರಿಯಲಿದ್ದಾರೆ’’ ಎಂದು ಸುಚರಿತಾ ಅವರ ಪುತ್ರಿ ಹೇಳಿದ್ದಾರೆ. ಈ ಬಾರಿ ಮಾಜಿ ನಟಿ ರೋಜಾ ಸೇರಿದಂತೆ ನಾಲ್ವರು ಮಹಿಳೆಯರು ಸಚಿವೆಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತರ ಇಬ್ಬರು ಮಾಜಿ ಸಚಿವರ ಬೆಂಬಲಿಗರು ಕೂಡ ಹೋರಾಟದ ಹಾದಿ ಹಿಡಿದಿದ್ದಾರೆ.
ಮುಖ್ಯಮಂತ್ರಿಯವರ ಸಂಬಂಧಿಕರಾದ ಬಾಲಿನೇನಿ ಶ್ರೀನಿವಾಸ ರೆಡ್ಡಿ ಅವರು ರವಿವಾರ ಮೊದಲ ಬಾರಿಗೆ ಬಂಡಾಯಕ್ಕೆ ಪ್ರಚೋದನೆ ನೀಡಿದ್ದರು. ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕತ್ವಕ್ಕೆ ಸಂದೇಶ ರವಾನಿಸಿದ್ದರು. ಅವರು ಶೀಘ್ರದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಬೆಂಬಲಿಗರು ಪ್ರಕಾಶಂ ಜಿಲ್ಲೆಯ ವಿವಿಧ ಭಾಗ ಹಾಗೂ ಒಂಗೋಲೆಯಲ್ಲಿ ರಸ್ತೆ ತಡೆ ನಡೆಸಿದರು ಹಾಗೂ ಸಂಪುಟದಲ್ಲಿ ಅವರನ್ನು ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿದರು.
ಒಂಗೋಲೆಯ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ನಂದಮೂರಿ ತಾರಕ ರಾಮ ರಾವ್ ಜಿಲ್ಲೆಯಲ್ಲಿ ಜಗ್ಗಯಪೇಟ್ನ ಶಾಸಕ ಸಾಮಿನೇನಿ ಉದಯಬಾನು ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ರಸ್ತೆ ತಡೆ ನಡೆಸಿದರು. ಅಲ್ಲದೆ, ವಾಹನ ಹಾಗೂ ಟಯರ್ಗಳಿಗೆ ಬೆಂಕಿ ಹಚ್ಚಿದರು. 2019ರಲ್ಲಿ 25 ಸದಸ್ಯರ ನೂತನ ಸಂಪುಟವನ್ನು ಆಯ್ಕೆ ಮಾಡುವ ಸಂದರ್ಭ ಜಗನ್ ಮೋಹನ್ ರೆಡ್ಡಿ ಅವರು 5 ವರ್ಷದ ಅವಧಿಯ ಮಧ್ಯದಲ್ಲಿ ಹೊಸ ತಂಡಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದ್ದರು.







