ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆ: ಭಾರೀ ಗೆಲುವಿನತ್ತ ಬಿಜೆಪಿ, ವಾರಣಾಸಿಯಲ್ಲಿ ಸೋಲು
![ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆ: ಭಾರೀ ಗೆಲುವಿನತ್ತ ಬಿಜೆಪಿ, ವಾರಣಾಸಿಯಲ್ಲಿ ಸೋಲು ಉತ್ತರ ಪ್ರದೇಶದ ವಿಧಾನ ಪರಿಷತ್ ಚುನಾವಣೆ: ಭಾರೀ ಗೆಲುವಿನತ್ತ ಬಿಜೆಪಿ, ವಾರಣಾಸಿಯಲ್ಲಿ ಸೋಲು](https://www.varthabharati.in/sites/default/files/images/articles/2022/04/12/331428-1649746806.jpg)
ಲಕ್ನೋ: ಉತ್ತರ ಪ್ರದೇಶದ ವಿಧಾನ ಪರಿಷತ್ತಿಗೆ ಅಥವಾ ಮೇಲ್ಮನೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವಿನತ್ತ ಸಾಗುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಗೆಲುವಿನ ವಾರಗಳ ನಂತರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ಕ್ಷೇತ್ರ ವಾರಣಾಸಿಯನ್ನು ಕಳೆದುಕೊಂಡಿದೆ.
ವಾರಣಾಸಿಯಲ್ಲಿ ಸ್ಥಳೀಯ ಪ್ರಬಲ ನಾಯಕ ಬ್ರಿಜೇಶ್ ಸಿಂಗ್ ಅವರ ಪತ್ನಿ ಅನ್ನಪೂರ್ಣ ಸಿಂಗ್ ಅವರು ಭಾರಿ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.
ಈ ಕ್ಷೇತ್ರದಲ್ಲಿ 2016 ರ ಚುನಾವಣೆಯಲ್ಲಿ ಬ್ರಿಜೇಶ್ ಸಿಂಗ್ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹೆಚ್ಚು ಕಡಿಮೆ ಸಿಂಗ್ ಗೆ ವಾಕ್ ಓವರ್ ನೀಡಿತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಲು ನಿರ್ಧರಿಸಿತು. ಪೂರ್ವ ಉತ್ತರಪ್ರದೇಶ ನಗರದಲ್ಲಿ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು.
ಉತ್ತರ ಪ್ರದೇಶ ವಿಧಾನ ಪರಿಷತ್ತಿನ 100 ಸ್ಥಾನಗಳ ಪೈಕಿ 36 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಮೇಲ್ಮನೆಯಲ್ಲಿ ಬಹುಮತ ಗಳಿಸಲು ಸಜ್ಜಾಗಿದೆ. ಅದು ಈಗಾಗಲೇ ಒಂಬತ್ತು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು.
ದಶಕಗಳ ನಂತರ ಮೊದಲ ಬಾರಿಗೆ ಉತ್ತರಪ್ರದೇಶದ ವಿಧಾನಸಭೆಯ ಉಭಯ ಸದನಗಳಲ್ಲಿ ಪಕ್ಷವು ಬಹುಮತ ಪಡೆಯಲಿದೆ.
ಸಮಾಜವಾದಿ ಪಕ್ಷವು ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದುಕೊಂಡಿಲ್ಲ. ಎಸ್ಪಿ ಅಭ್ಯರ್ಥಿಗಳಲ್ಲಿ ಗೋರಖ್ಪುರ ವೈದ್ಯ ಕಫೀಲ್ ಖಾನ್ ಕೂಡ ಸೇರಿದ್ದಾರೆ.