ಆಲ್ ರೌಂಡರ್ ದೀಪಕ್ ಚಹಾರ್ ಅವರನ್ನು ಕಾಡುತ್ತಿರುವ ಬೆನ್ನುನೋವು, ಐಪಿಎಲ್ ಟೂರ್ನಿಗೆ ವಾಪಸಾಗುವುದು ಅನುಮಾನ

Photo:twitter
ಹೊಸದಿಲ್ಲಿ, ಎ.12: ಬೆನ್ನುನೋವಿನಿಂದ ಬಳಲುತ್ತಿರುವ ಆಲ್ ರೌಂಡರ್ ದೀಪಕ್ ಚಹಾರ್ ಈಗ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಪರ ಆಡುವುದು ಅನುಮಾನವಾಗಿದೆ.
ತನ್ನ ಸ್ಟ್ರೈಕ್ ಬೌಲರ್ ಚಹಾರ್ ಇಲ್ಲದೆ ಪಂದ್ಯಾವಳಿಯನ್ನು ಪ್ರವೇಶಿಸಿದ ಹಾಲಿ ಚಾಂಪಿಯನ್ 10 ತಂಡಗಳ ಸ್ಪರ್ಧೆಯಲ್ಲಿ ಇದುವರೆಗೆ ತನ್ನ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಸೋತಿದೆ ಹಾಗೂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ
ಚೆನ್ನೈ ತಂಡವು ಎಪ್ರಿಲ್ ಎರಡನೇ ವಾರದ ಮೊದಲು ಚಹಾರ್ ಗುಣಮುಖರಾಗುತ್ತಾರೆ ಎಂದು ಹೇಳಿಕೊಂಡಿದ್ದರೂ, ಅವರ ಗಾಯದ ಗಂಭೀರತೆಯು ಪಂದ್ಯಾವಳಿಯಲ್ಲಿ "ಅವರ ಲಭ್ಯತೆಗೆ ಯಾವುದೇ ಅವಕಾಶ''ಇಲ್ಲವಾಗಿಸಿದೆ.
ಮೂಲಗಳ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ಹಾಗೂ ಸಿಎಸ್ಕೆ ತಂಡದ ಬೌಲರ್ ಪುನಶ್ಚೇತನ ಶಿಬಿರದ ಸಮಯದಲ್ಲಿ ಬೆನ್ನುನೋವಿಗೆ ಒಳಗಾದರು.
ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಟ್ವೆಂಟಿ-20 ಸರಣಿಯ ಸಮಯದಲ್ಲಿ ಚಹಾರ್ ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದು, ಒಂದು ತಿಂಗಳಿಗಿಂತ ಹೆಚ್ಚು ಕಾಲ ಎನ್ ಸಿಎ ನಲ್ಲಿದ್ದಾರೆ.
ಆರಂಭದಲ್ಲಿ ಚಹಾರ್ ಐಪಿಎಲ್ನ ಪ್ರಮುಖ ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ನಂಬಲಾಗಿತ್ತು, ಆದರೆ ಅವರ ತ್ವರಿತ ಚೇತರಿಕೆಯ ಹಿನ್ನೆಲೆಯಲ್ಲಿ ಎಪ್ರಿಲ್ ಕೊನೆಯಲ್ಲಿ ಚಹಾರ್ ಮರಳುವ ಆಶಾವಾದವನ್ನು ಚೆನ್ನೈ ಇಟ್ಟುಕೊಂಡಿತ್ತು.
ಈ ವರ್ಷ ನಡೆದ ಮೆಗಾ ಹರಾಜಿನಲ್ಲಿ 14 ಕೋಟಿ ರೂ.ಗೆ ಚೆನ್ನೈನಿಂದ ಖರೀದಿಸಲ್ಪಟ್ಟ 29 ವರ್ಷದ ಆಟಗಾರ ಶ್ರೀಲಂಕಾ ವಿರುದ್ಧದ ಸರಣಿಯನ್ನು ಕಳೆದುಕೊಂಡಿದ್ದರು.