VIDEO-ಮಂಗಳೂರು:ಸಿಎಂ ಬೊಮ್ಮಾಯಿ ಸಭೆ ನಡೆಸುತ್ತಿದ್ದ ಖಾಸಗಿ ಹೋಟೆಲ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆಗೆ ಯತ್ನ
ಮಿಥುನ್ ರೈ, ಲುಕ್ಮಾನ್ ಬಂಟ್ವಾಳ ಸಹಿತ ಹಲವರು ಪೊಲೀಸ್ ವಶಕ್ಕೆ

ಮಂಗಳೂರು : ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಅವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ನಗರದ ಖಾಸಗಿ ಹೊಟೇಲಿನಲ್ಲಿ ಬಿಜೆಪಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಕಾರ್ಯಕರ್ತರು ಇಂದು ಸಂಜೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈಶ್ವರಪ್ಪ ವಿರುದ್ದ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸುತ್ತಿದ್ದ ಖಾಸಗಿ ಹೊಟೇಲ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ನುಗ್ಗಲು ಯತ್ನಿಸಿದರು. ಇದರಿಂದ ಪೊಲೀಸರು ಕೆಲಕಾಲ ತಬ್ಬಿಬ್ಬಾದರು. ತಕ್ಷಣ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಹೊಟೇಲ್ ಬಾಗಿಲಿನಿಂದ ರಸ್ತೆಯತ್ತ ತಳ್ಳಿಕೊಂಡು ಬಂದು ನಂತರ ಹಲವರನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.