ಉಡುಪಿ: ದ್ವಿತೀಯ ಪಿಯುಸಿಗೆ 15,272 ವಿದ್ಯಾರ್ಥಿಗಳು ಮುಕ್ತ ವಾತಾವರಣ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಡಿಸಿ ಕರೆ

ಉಡುಪಿ : ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮುಕ್ತ ವಾತಾವರಣದಲ್ಲಿ, ಪಾರದರ್ಶಕವಾಗಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಪರೀಕ್ಷೆಯನ್ನು ಬರೆಯುವ ಅವಕಾಶ ಕಲ್ಪಿಸುವುದರೊಂದಿಗೆ ಪರೀಕ್ಷೆಯನ್ನು ಯಶಸ್ವಿ ಗೊಳಿಸಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ಹಾಲ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಗಳು ಎ.೨೨ರಿಂದ ಮೇ ೧೮ರವರೆಗೆ ಬೆಳಗ್ಗೆ ೧೦:೧೫ ರಿಂದ ಅಪರಾಹ್ನ ೧:೩೦ರವರೆಗೆ ಜಿಲ್ಲೆಯ ೨೮ ಪರೀಕ್ಷಾ ಕೇಂದ್ರಗಳಲ್ಲಿ ನಡೆಯ ಲಿವೆ. ಹೊಸದಾಗಿ ೧೪,೫೯೭ ಮಂದಿ, ಖಾಸಗಿ ೩೨೬ ಹಾಗೂ ೩೪೯ ಮರು ಪರೀಕ್ಷೆ ಬರೆಯುವವರು ಸೇರಿದಂತೆ ಒಟ್ಟು ೧೫,೨೭೨ ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ವಿಜ್ಞಾನ ವಿಭಾಗದಲ್ಲಿ ೨೨೦೩ ವಿದ್ಯಾರ್ಥಿಗಳು, ೨೫೮೯ ವಿದ್ಯಾರ್ಥಿನಿಯರು ಸೇರಿ ಒಟ್ಟು ೪೭೯೨, ವಾಣಿಜ್ಯ ವಿಭಾಗದಲ್ಲಿ ೩೯೩೫ ವಿದ್ಯಾರ್ಥಿಗಳು ಹಾಗೂ ೩೯೧೫ ವಿದ್ಯಾರ್ಥಿನಿಯರು ಸೇರಿ ಒಟ್ಟು ೭೮೫೦ ಮತ್ತು ಕಲಾ ವಿಭಾಗದಲ್ಲಿ ೭೯೬ ವಿದ್ಯಾರ್ಥಿಗಳು ಹಾಗೂ ೭೨೮ ವಿದ್ಯಾರ್ಥಿನಿಯರು ಸೇರಿ ಒಟ್ಟು ೧೫೨೪ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿ, ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ವಿತರಿಸುವ ತಂಡ, ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರ ನೇಮಕ, ಪ್ರಶ್ನೆ ಪತ್ರಿಕೆ ಪಾಲಕರ ತಂಡ, ಜಿಲ್ಲೆಯ ಮಾರ್ಗಾಧಿಕಾರಿಗಳ ತಂಡ, ಪರೀಕ್ಷೆಯ ಪರೀಕ್ಷಣೆಯ ಸಂಚಾರಿ ಜಾಗೃತ ದಳ ಮತ್ತಿತರ ತಂಡಗಳನ್ನು ನೇಮಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಕಾಲಾವಧಿಯೊಳಗೆ ಹಾಜರಾಗಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪರೀಕ್ಷೆಯ ಗೌಪ್ಯ ವಸ್ತುಗಳನ್ನು ಜಿಲ್ಲಾ ಖಜಾನೆಗಳಿಂದ ಪಡೆದು, ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಯಾವುದೇ ಗೊಂದಲಗಳಿಲ್ಲದೇ ವಿತರಿಸಬೇಕೆಂದ ಅವರು, ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯುವಾಗ ಹಾಗೂ ಉತ್ತರ ಪತ್ರಿಕೆ ಸ್ವೀಕರಿಸಿ, ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣೆಯಲ್ಲಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳ ವಿರುದ್ಧ ದಂಡ ಪ್ರಕ್ರಿಯ ಸಂಹಿತೆ ಕಲಂ ೧೦೭ ಮತ್ತು ೧೦೮ರ ಅಡಿಯಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತಾಲೂಕು ದಂಡಾಧಿಕಾರಿಗಳು ಕೈಗೊಳ್ಳಬೇಕೆಂದು ಸೂಚಿಸಿದರು.
ಪರೀಕ್ಷೆ ಅಕ್ರಮಗಳಾದ ಪ್ರಶ್ನೆ ಪತ್ರಿಕೆ ಸೋರಿಕೆ, ಅವುಗಳ ಖರೀದಿ ಮತ್ತು ಮಾರಾಟ, ಮೊಬೈಲ್ ಫೋನ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಮುಖಾಂತರ ಪ್ರಶ್ನೆ ಪತ್ರಿಕೆ ಸೋರಿಕೆಗೆ ವಿದ್ಯಾರ್ಥಿ ಹಾಗೂ ವ್ಯಕ್ತಿ ಗಳೊಂದಿಗೆ ಸಹಕರಿಸುವುದು, ಪ್ರಶ್ನೆಪತ್ರಿಕೆ ಬಗ್ಗೆ ವದಂತಿ ಹರಡುವುದು, ಅಕ್ರಮಕ್ಕೆ ಪ್ರೇರೇಪಿಸುವುದು ಮತ್ತು ಪ್ರೋತ್ಸಾಹಿಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಅಕ್ರಮಗಳಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ೫ ವರ್ಷಗಳ ಕಾಲ ಜೈಲುವಾಸ, ೫ ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಈ ಹಿಂದೆ ಪರೀಕ್ಷೆಗಳಲ್ಲಿ ಬಳಸಿರುವ ಪ್ರಶ್ನೆ ಪತ್ರಿಕೆಗಳು, ಕೈ ಬರಹ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಿ, ವದಂತಿಗಳನ್ನು ಹಬ್ಬಿಸಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ವಿನಾಕಾರಣ ಗೊಂದಲ ಸೃಷ್ಟಿಸಿದಲ್ಲಿ ಅಂತಹವರ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ, ಪರೀಕ್ಷಾ ಕೊಠಡಿಗಳಲ್ಲಿ ಗೌಪ್ಯ ವಸ್ತುಗಳ ಲೋಡಿಂಗ್, ಅನ್ಲೋಡಿಂಗ್, ಠೇವಣಿ ಹಾಗೂ ವಿತರಣೆ ಕಾರ್ಯವನ್ನು ಸಿಸಿಟಿವಿ ವೀಕ್ಷಣೆಯಲ್ಲಿ ನಡೆಸುವ ಹಿನ್ನೆಲೆಯಲ್ಲಿ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಪರೀಕ್ಷಾ ಕೇಂದ್ರಗಳು, ಗೌಪ್ಯ ವಸ್ತುಗಳನ್ನು ಸಾಗಿಸುವ ಮಾರ್ಗಗಳು ಸಶಸ್ತ್ರ ಪೊಲೀಸ್ ಬೆಂಗಾವಲಿನಲ್ಲಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದ ಅವರು, ಅವುಗಳ ಸುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಕ್ರಮ ಕೈಗೊಳ್ಳಲಾ ಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಡಿಡಿಪಿಐ ಗೋವಿಂದ ಮಡಿವಾಳ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.