ಡಬ್ಲ್ಯುಟಿಒ ಅನುಮತಿಸಿದರೆ ಜಗತ್ತಿಗೆ ಆಹಾರ ಪೂರೈಸಲು ಭಾರತ ಸಿದ್ಧ: ಪ್ರಧಾನಿ ಮೋದಿ

ಹೊಸದಿಲ್ಲಿ, ಎ.12: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಮಂಗಳವಾರ ತನ್ನ ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು,ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯು ಅನುಮತಿಸಿದರೆ ಭಾರತದ ಆಹಾರ ದಾಸ್ತಾನನ್ನು ಜಗತ್ತಿಗೆ ಪೂರೈಸುವ ಕೊಡುಗೆಯನ್ನು ನೀಡಿದ್ದಾರೆ.
ಉಕ್ರೇನ್ ಯುದ್ಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ ಎಂದು ಗುಜರಾತಿನ ಅಡಾಲಜ್ ನಲ್ಲಿ ಶ್ರೀ ಅನ್ನಪೂರ್ಣಾ ಧಾಮ ಟ್ರಸ್ಟ್ ನ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಕೀರ್ಣವನ್ನು ವೀಡಿಯೊ ಲಿಂಕ್ ಮೂಲಕ ಉದ್ಘಾಟಿಸಿದ ಬಳಿಕ ಹೇಳಿದ ಮೋದಿ, ʼಯಾರಿಗೂ ತಾವು ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಶ್ವವು ಅನಿಶ್ಚಿತ ಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲ ಬಾಗಿಲುಗಳು ಮುಚ್ಚುತ್ತಿರುವುದರಿಂದ ಪೆಟ್ರೋಲ್, ತೈಲ ಮತ್ತು ರಸಗೊಬ್ಬರಗಳ ಖರೀದಿ ಕಷ್ಟವಾಗಿದೆ. ರಶ್ಯ-ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಪ್ರತಿಯೊಬ್ಬರೂ ತಮ್ಮ ದಾಸ್ತಾನುಗಳನ್ನು ಭದ್ರಗೊಳಿಸಿಕೊಳ್ಳಲು ಬಯಸಿದ್ದಾರೆʼ ಎಂದರು.
‘ವಿಶ್ವವು ಇಂದು ಹೊಸ ಸಮಸ್ಯೆಯನ್ನು ಎದುರಿಸುತ್ತಿದೆ. ವಿಶ್ವದಲ್ಲಿಯ ಆಹಾರ ದಾಸ್ತಾನು ಬರಿದಾಗುತ್ತಿದೆ. ನಾನು ಅಮೆರಿಕದ ಅಧ್ಯಕ್ಷರ ಜೊತೆ ಮಾತನಾಡುತ್ತಿದ್ದಾಗ ಅವರೂ ಈ ವಿಷಯವನ್ನು ಪ್ರಸ್ತಾವಿಸಿದರು. ಡಬ್ಲುಟಿಒ ಅನುಮತಿಸಿದರೆ ನಾಳೆಯಿಂದಲೇ ತನ್ನ ಆಹಾರ ದಾಸ್ತಾನನ್ನು ಜಗತ್ತಿಗೆ ಪೂರೈಸಲು ಭಾರತವು ಸಿದ್ಧವಿದೆ ಎಂದು ನಾನು ಅವರಿಗೆ ತಿಳಿಸಿದ್ದೇನೆ’ ಎಂದ ಮೋದಿ, ‘ನಾವೀಗಾಗಲೇ ನಮ್ಮ ಜನರಿಗೆ ಸಾಲುವಷ್ಟು ಆಹಾರವನ್ನು ಹೊಂದಿದ್ದೇವೆ, ಆದರೆ ನಮ್ಮ ರೈತರು ಇಡೀ ಜಗತ್ತಿಗೆ ಆಹಾರವನ್ನು ಒದಗಿಸುವ ವ್ಯವಸ್ಥೆಗಳನ್ನು ಮಾಡಿರುವಂತಿದೆ. ಆದಾಗ್ಯೂ ಜಾಗತಿಕ ಕಾನೂನುಗಳಂತೆ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಡಬ್ಲುಟಿಒ ಯಾವಾಗ ಅನುಮತಿಯನ್ನು ನೀಡುತ್ತದೆ ಮತ್ತು ನಾವು ಎಂದಿನಿಂದ ಜಗತ್ತಿಗೆ ಆಹಾರವನ್ನು ಪೂರೈಸಬಹುದು ಎನ್ನುವುದು ನನಗೆ ತಿಳಿದಿಲ್ಲ ’ ಎಂದರು.







