ಐಪಿಎಲ್: ಶಿವಂ ದುಬೆ, ಉತ್ತಪ್ಪ ಅರ್ಧಶತಕ, ಗೆಲುವಿನ ಖಾತೆ ತೆರೆದ ಚೆನ್ನೈ
ತೀಕ್ಷಣ, ಜಡೇಜ ಅಮೋಘ ಬೌಲಿಂಗ್

Photo:twitter
ನವಿ ಮುಂಬೈ, ಎ.12: ಮಧ್ಯಮ ಕ್ರಮಾಂಕದ ಆಟಗಾರ ಶಿವಂ ದುಬೆ (ಔಟಾಗದೆ 95, 46 ಎಸೆತ)ಹಾಗೂ ಆರಂಭಿಕ ಬ್ಯಾಟರ್ ರಾಬಿನ್ ಉತ್ತಪ್ಪ (88 ರನ್, 50 ಎಸೆತ)ಸಿಡಿಸಿದ ಭರ್ಜರಿ ಅರ್ಧಶತಕ, ಸ್ಪಿನ್ನರ್ಗಳಾದ ಮಹೇಶ್ ತೀಕ್ಷಣ (4-33) ಹಾಗೂ ರವೀಂದ್ರ ಜಡೇಜ(3-39) ಅವರ ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಸತತ 4 ಪಂದ್ಯಗಳ ಸೋಲಿನಿಂದ ಹೊರ ಬಂದಿದೆ.
ಸೋಮವಾರ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 22ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಗೆಲ್ಲಲು ಕಠಿಣ ಗುರಿ ಪಡೆದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರ್ಸಿಬಿ ಪರ ಶಹಬಾಝ್ ಅಹ್ಮದ್(41 ರನ್), ದಿನೇಶ್ ಕಾರ್ತಿಕ್ (34 ರನ್)
ಹಾಗೂ ಪ್ರಭುದೇಸಾಯಿ(34) ಎರಡಂಕೆಯ ಸ್ಕೋರ್ ಗಳಿಸಿದರು. ತೀಕ್ಷಣ ಹಾಗೂ ಜಡೇಜ 7 ವಿಕೆಟ್ ಹಂಚಿಕೊಂಡರೆ, ಮುಕೇಶ್ ಚೌಧರಿ ಹಾಗೂ ಡ್ವೆಯ್ನೆ ಬ್ರಾವೊ ತಲಾ 1 ವಿಕೆಟ್ ಪಡೆದರು.
ಚೆನ್ನೈ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(17 ರನ್)ಬೇಗನೆ ಔಟಾದರು. ಆಲ್ರೌಂಡರ್ ಮೊಯಿನ್ ಅಲಿ(3) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ರನೌಟಾದರು. ಆಗ ತಂಡಕ್ಕೆ ಆಸರೆಯಾದ ಉತ್ತಪ್ಪ (88 ರನ್, 50 ಎಸೆತ, 4 ಬೌಂಡರಿ, 9 ಸಿಕ್ಸರ್)ಹಾಗೂ ಶಿವಂ ದುಬೆ(ಔಟಾಗದೆ 95 ರನ್, 46 ಎಸೆತ, 5 ಬೌಂಡರಿ, 8 ಸಿಕ್ಸರ್)3ನೇ ವಿಕೆಟ್ಗೆ 165 ರನ್ ಜೊತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಶಿವಂ ದುಬೆ ಕೇವಲ 5 ರನ್ನಿಂದ ಶತಕ ವಂಚಿತರಾದರು. ಆರ್ಸಿಬಿ ಪರ ವನಿಂದು ಹಸರಂಗ (2-35) ಯಶಸ್ವಿ ಬೌಲರ್ ಎನಿಸಿಕೊಂಡರು.







