ಹೆಲಿನಾ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಹಾರಾಟ
ಹೊಸದಿಲ್ಲಿ,ಎ.12: ಭಾರತವು ಸೋಮವಾರ ತನ್ನ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ ಹೆಲಿನಾದ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಹೆಲಿನಾ ವಿಶ್ವದ ಅತ್ಯಾಧುನಿಕ ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ.
ಹೆಲಿನಾ (ಹೆಲಿಕಾಪ್ಟರ್ ಆಧಾರಿತ ನಾಗ್ ಕ್ಷಿಪಣಿ) ಮೂರನೇ ಪೀಳಿಗೆಯ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ (ಎಟಿಜಿಎಂ) ವ್ಯವಸ್ಥೆಯಾಗಿದ್ದು,ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯು ಇದನ್ನು ದೇಶಿಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದೆ. ಸೋಮವಾರ ಡಿಆರ್ಡಿಒ ವಿಜ್ಞಾನಿಗಳು,ಭೂಸೇನೆ ಮತ್ತು ವಾಯುಪಡೆಯ ಅಧಿಕಾರಿಗಳ ತಂಡವು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್)ನಿಂದ ಹಾರಾಟ ಪ್ರಯೋಗಗಳನ್ನು ನಡೆಸಿತು.
ಇಮೇಜಿಂಗ್ ಇನ್ಫ್ರಾ ರೆಡ್ ಅನ್ವೇಷಕದಿಂದ ನಿರ್ದೇಶಿತವಾಗಿರುವ ಹೆಲಿನಾ ನೇರವಾಗಿ ಅಥವಾ ಟಾಪ್ ಅಟ್ಯಾಕ್ ವಿಧಾನದಲ್ಲಿ ಗುರಿಯನ್ನು ಅಪ್ಪಳಿಸಬಲ್ಲುದು. ಸರ್ವ ಋತುಗಳಲ್ಲಿ ಮತ್ತು ರಾತ್ರಿಯಲ್ಲಿಯೂ ಕಾರ್ಯಾಚರಿಸುವ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯು ಸಾಂಪ್ರದಾಯಿಕ ರಕ್ಷಾಕವಚ ಮತ್ತು ಸ್ಫೋಟಕ ಪ್ರತಿಕ್ರಿಯಾತ್ಮಕ ರಕ್ಷಾಕವಚಗಳನ್ನು ಹೊಂದಿರುವ ಯುದ್ಧ ಟ್ಯಾಂಕ್ಗಳನ್ನು ನಾಶಗೊಳಿಸಬಲ್ಲುದು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಜಂಟಿ ಕಾರ್ಯದ ಮೂಲಕ ಮೊದಲ ಸಾಧನೆಗಾಗಿ ಡಿಆರ್ಡಿಒ ಮತ್ತು ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ.





