ವಿಶ್ವಸಂಸ್ಥೆ ನಿರ್ಣಯ ಪಾಲಿಸುವಂತೆ ತಾಲಿಬಾನ್ ಗೆ ಭಾರತ, ಅಮೆರಿಕ ಕರೆ
ವಾಶಿಂಗ್ಟನ್, ಎ.12: ಯಾವುದೇ ದೇಶದ ಮೇಲೆ ದಾಳಿ ನಡೆಸಲು ಅಥವಾ ಬೆದರಿಕೆಯೊಡ್ಡಲು ಇಲ್ಲವೇ ಭಯೋತ್ಪಾದಕ ದಾಳಿ ಸಂಚುಗಳನ್ನು ರೂಪಿಸುವುದಕ್ಕಾಗಿ ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವನ್ನು ನೀಡುವುದಕ್ಕಾಗಲಿ ಅಫ್ಘಾನಿಸ್ತಾನದ ನೆಲವನ್ನು ಬಳಸಬಾರದು ಎಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ. ನಿರ್ಣಯವನ್ನು ಪಾಲಿಸುವಂತೆ ಭಾರತ ಹಾಗೂ ಅಮೆರಿಕವು ತಾಲಿಬಾನ್ ನಾಯಕತ್ವಕ್ಕೆ ಕರೆ ನೀಡಿದೆ.
ಭಾರತ-ಅಮೆರಿಕ ನಡುವೆ 2+2 ಸಚಿವ ಮಟ್ಟದ ನಾಲ್ಕನೇ ಸಭೆಯ ಬಳಿಕ ಉಭಯದೇಶಗಳ ಸಚಿವರು ಜಂಟಿ ಹೇಳಿಕೆಯೊಂದನ್ನು ನೀಡಿದ್ದು, ‘ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಸೇರಿದಂತೆ ಎಲ್ಲಾ ಅಫ್ಘನ್ನರ ಮಾನವಹಕ್ಕುಗಳನ್ನು ಗೌರವಿಸುವಂತೆ ಮತ್ತು ಪ್ರಯಾಣಿಸುವ ಸ್ವಾತಂತ್ರವನ್ನು ಎತ್ತಿಹಿಡಿಯಬೇಕು’ ಎಂದು ತಾಲಿಬಾನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಭಾರತ ಹಾಗೂ ಅಮೆರಿಕ ನಡುವಿನ ನಾಲ್ಕನೆ 2+2 ಸಚಿವಾಂಗ ಸಭೆಯು ಸೋಮವಾರ ವಾಶಿಂಗ್ಟನ್ ನಲ್ಲಿ ನಡೆಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ರಕ್ಷಣಾ ಕಾರ್ಯದರ್ಶಿ ಲಾಯ್ಡಿ ಆಸ್ಟಿನ್ ಅವರು ರಾಜನಾಥ್ ಸಿಂಗ್ ಹಾಗೂ ಜೈಶಂಕರ್ ಅವರನ್ನು ಮಾತುಕತೆಗಾಗಿ ವಾಶಿಂಗ್ಟನ್ ಗೆ ಆಹ್ವಾನಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮಾತುಕತೆ ನಡೆದ ಬೆನ್ನಲ್ಲೇ ಉಭಯದೇಶಗಳ ಸಚಿವಾಂಗ ಮಟ್ಟದ ಸಭೆ ನಡೆದಿದೆ.







