ಭಾರತದಿಂದ ಶ್ರೀಲಂಕಾಗೆ 11 ಸಾವಿರ ಮೆಟ್ರಿಕ್ ಟನ್ ಅಕ್ಕಿ ರವಾನೆ
ಕೊಲಂಬೊ, ಎ.12: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ಜನತೆಗೆ ಸಾಂಪ್ರದಾಯಿಕ ಹೊಸ ವರ್ಷಾಚರಣೆಯ ನೆರವಿನ ಕೊಡುಗೆಯಾಗಿ ಭಾರತವು ನೀಡಿರುವ 11 ಸಾವಿರ ಮೆಟ್ರಿಕ್ ಟನ್ ಅಕ್ಕಿ ಮಂಗಳವಾರ ದ್ವೀಪರಾಷ್ಟ್ರಕ್ಕೆ ಆಗಮಿಸಿದೆ.
ಶ್ರೀಲಂಕಾದ ಪ್ರಜೆಗಳು ಎಪ್ರಿಲ್ 13 ಹಾಗೂ 14ನೇ ದಿನಾಂಕಗಳನ್ನು ಸಿಂಹಳಿ ಹಾಗೂ ತಮಿಳು ಹೊಸವರ್ಷವಾಗಿ ಆಚರಿಸುತ್ತಿದ್ದಾರೆ.
ಶ್ರೀಲಂಕಾದ ಜನತೆಯ ಹೊಸ ವರ್ಷಾಚರಿಸುವ ಮುನ್ನವೇ ಸರಕು ಸಾಗಣೆ ಹಡಗಿನ ಮೂಲಕ ಭಾರತವು ಕಳುಹಿಸಿರುವ ಅಕ್ಕಿಯ ದಾಸ್ತಾನು ಮಂಗಳವಾರ ಕೊಲಂಬೊ ಬಂದರನ್ನು ತಲುಪಿದೆ ಎಂದು ಭಾರತೀಯ ಹೈಕಮೀಶನ್ ಹೇಳಿಕೆ ತಿಳಿಸಿದೆ.
ಶ್ರೀಲಂಕಾಗೆ ಭಾರತ ನೀಡುತ್ತಿರುವ ಬಹುವಿಧದ ನೆರವಿನಡಿ ಕಳೆದ ವಾರವೊಂದರಲ್ಲೇ 16 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಶ್ರೀಲಂಕಾಗೆ ಪೂರೈಕೆ ಮಾಡಲಾಗಿದೆ. ಭಾರತ ಹಾಗೂ ಶ್ರೀಲಂಕಾದ ನಡುವಿನ ವಿಶೇಷ ಬಾಂಧವ್ಯ ಮುಂದುವರಿಯಲಿರುವುದಾಗಿಯೂ ಅದು ಹೇಳಿದೆ. 1948ರಲ್ಲಿ ಶ್ರೀಲಂಕಾವು ಬ್ರಿಟನ್ನಿಂದ ಸ್ವಾತಂತ್ರ ಪಡೆದ ಬಳಿಕ ಪ್ರಸಕ್ತ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಆ ದೇಶಕ್ಕೆ ನೀಡಲಾಗುತ್ತಿರುವ ಆರ್ಥಿಕ ಸಹಾಯದ ಭಾಗವಾಗಿ ಭಾರತವು ಆ ದೇಶಕ್ಕೆ ಈಗಾಗಲೇ 1 ಶತಕೋಟಿ ಡಾಲರ್ ಸಾಲವನ್ನು ಕೂಡಾ ಪ್ರಕಟಿಸಿದೆ.





