ಐಪಿಎಲ್; ಒಂದೇ ಪಂದ್ಯದಲ್ಲಿ 17 ಸಿಕ್ಸ್ ಬಿಟ್ಟುಕೊಟ್ಟ ಆರ್ ಸಿ ಬಿ !
ಫೋಟೊ : (BCCI/IPL/PTI)
ಹೊಸದಿಲ್ಲಿ: ನವಿಮುಂಬೈ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಗಳು ಒಂದೇ ಸೆಷನ್ ನಲ್ಲಿ 17 ಸಿಕ್ಸರ್ ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟರು.
ಕರ್ನಾಟಕದವರೇ ಆದ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ ಸಿಕ್ಸರ್ ಗಳ ಮಳೆಗೆರೆದು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಸಿಎಸ್ಕೆಗೆ 17 ಸಿಕ್ಸರ್ ನೀಡಿದ್ದಲ್ಲದೇ, ಪಂಜಾಬ್ ಕಿಂಗ್ಸ್ ವಿರುದ್ಧ 14, ರಾಜಸ್ಥಾನ ರಾಯಲ್ಸ್ ವಿರುದ್ಧ 11, ಮುಂಬೈ ಹಾಗೂ ಕೊಲ್ಕತ್ತಾ ವಿರುದ್ಧ ತಲಾ 7 ಸಿಕ್ಸರ್ ಗಳನ್ನು ಹೊಡೆಸಿಕೊಂಡು ಒಟ್ಟು 56 ಸಿಕ್ಸರ್ ಗಳನ್ನು ಈಗಾಗಲೇ ಆರ್ಸಿಬಿ ಬೌಲರ್ ಗಳು ನೀಡಿದಂತಾಗಿದೆ.
ಪುಣೆ ವಾರಿಯರ್ಸ್ 2013ರಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 21 ಸಿಕ್ಸರ್ ಗಳನ್ನು ಹೊಡೆಸಿಕೊಂಡಿರುವುದು ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ದಾಖಲೆಯಾಗಿದೆ.
ಉತ್ತಪ್ಪ (50 ಎಸೆತದಲ್ಲಿ 88) ಮತ್ತು ದುಬೆ (46 ಎಸೆತದಲ್ಲಿ 95 ನಾಟೌಟ್) ಮೂರನೇ ವಿಕೆಟ್ಗೆ 74 ಎಸೆತಗಳಲ್ಲಿ 165 ರನ್ ಗಳಿಸಿದರು. ಇದು ಈ ಸೀಸನ್ನ ಸುಧೀರ್ಘ ಜತೆಯಾಟವಾಗಿದೆ. ಚೆನ್ನೈ ಕೊನೆಯ 5 ಓವರ್ ಗಳಲ್ಲಿ 73 ರನ್ಗಳನ್ನು ಬಾಚಿಕೊಂಡಿತು. ಉತ್ತಪ್ಪ 9 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದರೆ, ದುಬೆ 8 ಸಿಕ್ಸರ್ ಹಾಗೂ ಐದು ಬೌಂಡರಿ ಬಾರಿಸಿದರು.