ಸ್ಪೈಸ್‌ಜೆಟ್‌ನ 90 ಪೈಲಟ್‌ಗಳಿಗೆ ಬೋಯಿಂಗ್ 737 ಮ್ಯಾಕ್ಸ್ ಚಲಾಯಿಸದಂತೆ ನಿರ್ಬಂಧ; ಕಾರಣವೇನು ಗೊತ್ತೇ?

ಹೊಸದಿಲ್ಲಿ: ಸ್ಪೈಸ್‌ಜೆಟ್ ನ 90 ಪೈಲಟ್‌ಗಳು ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಚಲಾಯಿಸಲು ಸರಿಯಾಗಿ ತರಬೇತಿ ಹೊಂದಿಲ್ಲ ಎಂದು ಭಾರತೀಯ ವಾಯುಯಾನ ನಿಯಂತ್ರಕ (ಡಿಜಿಸಿಎ) ಅವರನ್ನು ನಿರ್ಬಂಧಿಸಿದೆ.
ಸದ್ಯಕ್ಕೆ ನಾವು ಈ ಪೈಲಟ್‌ಗಳನ್ನು ಬೋಯಿಂಗ್ ಮ್ಯಾಕ್ಸ್ ಹಾರಿಸುವುದನ್ನು ನಿರ್ಬಂಧಿಸಿದ್ದೇವೆ ಮತ್ತು ಅವರು ವಿಮಾನವನ್ನು ಹಾರಿಸಲು ಯಶಸ್ವಿಯಾಗಿ ಮರು ತರಬೇತಿ ಪಡೆಯಬೇಕಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೈಲಟ್‌ಗಳು ಮ್ಯಾಕ್ಸ್ ಸಿಮ್ಯುಲೇಟರ್‌ನಲ್ಲಿ ಸರಿಯಾದ ರೀತಿಯಲ್ಲಿ ಮತ್ತೆ ತರಬೇತಿಯನ್ನು ಪಡೆಯಬೇಕಾಗುತ್ತದೆ. ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮವನ್ನು ಡಿಜಿಸಿಎ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
2019ರ ಮಾರ್ಚ್ 13ರಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿತ್ತು. ಇಥೋಪಿಯನ್ ಏರ್‌ಲೈನ್ಸ್ 737 ಮ್ಯಾಕ್ಸ್ ವಿಮಾನವು ಅಪಘಾತಕ್ಕೀಡಾಗಿ, ನಾಲ್ವರು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟ ದುರಂತ ನಡೆದು ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು.
ಅಮೆರಿಕ ಮೂಲದ ವಿಮಾನ ತಯಾರಕ ಕಂಪೆನಿ ಬೋಯಿಂಗ್, ವಿಮಾನದಲ್ಲಿನ ಅಗತ್ಯ ಸಾಫ್ಟ್‌ವೇರ್ ಲೋಪಗಳನ್ನು ತಿದ್ದುಪಡಿ ಮಾಡಿದ ಬಳಿಕ ಡಿಜಿಸಿಎ ತೃಪ್ತಗೊಂಡಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಮ್ಯಾಕ್ಸ್ ವಿಮಾನಗಳ ಮೇಲಿನ ನಿಷೇಧವನ್ನು ವಾಪಸ್ ಪಡೆಯಲು ಈ ವಿಭಾಗದ ವಿಮಾನಗಳ ಚಾಲನೆಗಾಗಿ ಪೈಲಟ್‌ಗಳಿಗೆ ಸಮರ್ಪಕ ರೀತಿಯ ತರಬೇತಿ ನೀಡಬೇಕು ಎಂದು ಡಿಜಿಸಿಎ ಷರತ್ತು ವಿಧಿಸಿತ್ತು.







