ಈಶ್ವರಪ್ಪರ ರಾಜೀನಾಮೆ ಪಡೆಯದಿದ್ದಲ್ಲಿ ಒಂದು ತಿಂಗಳು ಕಾಮಗಾರಿ ಸ್ಥಗಿತ: ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ
ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣ

ಡಿ.ಕೆಂಪಣ್ಣ -(File photo)
ಬೆಂಗಳೂರು, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳದ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಈಶ್ವರಪ್ಪರ ರಾಜೀನಾಮೆ ಪಡೆಯುವ ಜೊತೆಗೆ, ರಾಜ್ಯ ಸರಕಾರ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಮೇ 25 ತಿಂಗಳಿನಿಂದ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಎಲ್ಲ ರೀತಿಯ ಕಾಮಗಾರಿ ನಿಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಘೋಷಿಸಿದೆ.
ನಗರದಲ್ಲಿಂದು ಚಾಮರಾಜಪೇಟೆಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಬಿಜೆಪಿ ಸದಸ್ಯರೂ ಆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕು. ಸಂತ್ರಸ್ತ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಇನ್ನೂ, ಈ ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಾವಿಗೆ ಯಾರು ಕಾರಣವೆಂದ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದರು. ಇನ್ನೂ, ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾಗೆ ಪ್ರಧಾನಿ ಮೋದಿಗೂ ದೂರು ಸಲ್ಲಿಸಿದ್ದರು. ದಿಲ್ಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದು ಕೆಂಪಣ್ಣ ಬೇಸರ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸರ್ಕಾರ ನೇರ ಕಾರಣ, ಅದರಲ್ಲೂ ಈಶ್ವರಪ್ಪನೇ ಕಾರಣ ಎಂದ ಅವರು, ಆತ್ಮಹತ್ಯೆ ಇದು ಆತ್ಮಹತ್ಯೆಯಲ್ಲ, ಅವರನ್ನು ಕೊಲೆ ಮಾಡಿದ್ದಾರೆ. ರೌಡಿಗಳನ್ನು ಕರೆಸಿ ಬೆದರಿಸಿದ್ದಾರೆ. ಈ ಬಗ್ಗೆ ನನಗೆ 15 ದಿನಗಳ ಹಿಂದೆ ಕರೆ ಮಾಡಿ ಸಂತೋಷ್ ಮಾತನಾಡಿದ್ದ. ಒಂದೂವರೆ ತಿಂಗಳಿಂದ ಮನೆಗೆ ಹೋಗದಂತೆ ಮಾಡಿದ್ದರು ಎಂದು ಆರೋಪಿಸಿದರು
ಭ್ರಷ್ಟಾಚಾರ, ಕಮಿಷನ್ ದಂಧೆ ಕುರಿತು ಸುದ್ದಿ, ಸಾಕ್ಷ್ಯ ಇದ್ದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೌಜನ್ಯಕ್ಕೂ ನಮ್ಮನ್ನ ಕರೆದು ಸಭೆ ಮಾಡಿಲ್ಲ. ಎಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಾಗಲೇ ನಾವು ಕಮಿಷನ್ ವಿಚಾರವಾಗಿಯೇ ಬಿಎಸ್ ವೈ, ಸಿಎಂ ಮತ್ತು ಪಿಎಂಗೆ ಪತ್ರ ಬರೆದವು ಎಂದು ಅವರು ಹೇಳಿದರು.
ಪ್ರಮುಖವಾಗಿ 2019ರಿಂದ ಕಮಿಷನ್ ದಂಧೆ ಹೆಚ್ಚಾಗಿದೆ. ಪ್ರಧಾನಿ ಅವರಿಗೆ ಪತ್ರ ಕೊಟ್ಟ ಮೇಲೆ ಸಂತೋಷ್ ಗೆ ಬೆದರಿಕೆ ಹೆಚ್ಚಾಗಿತ್ತು. ಹೀಗಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅದೇರೀತಿ ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದ ಶಾಸಕರೊಬ್ಬರ ಮಗ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಭ್ರಷ್ಟಚಾರದ ದಾಖಲೆಗಳನ್ನ ಬಳಿಕ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಶಾಸಕರು, ಸಚಿವರು ನಮಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮೊದಲು ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು
ಕಳಪೆ ಕಾಮಗಾರಿ: ಕಮಿಷನ್ ದಂಧೆ ಕಾರಣದಿಂದಾಗಿ ಎಲ್ಲಾ ಕಾಮಾಗಾರಿಗಳು ಕಳಪೆಯಿಂದ ಕೂಡಿರುತ್ತೆ. ಉದಾಹರಣೆಗೆ 10 ಸಾವಿರ ಕೋಟಿ ರೂ. ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ರಾಜರಾಜೇಶ್ವರಿ ನಗರದಲ್ಲಿ ಆ ರಸ್ತೆ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದರು.
ಶೀಘ್ರದಲ್ಲೇ ಡಾ.ಕೆ.ಸುಧಾಕರ್ ಫೈಲ್ ಬಿಡುಗಡೆ..!
ಕೇವಲ ಗ್ರಾಮೀಣಾಭಿವೃದ್ಧಿ ಸಚಿವ ಮಾತ್ರವಲ್ಲ, ಲೋಕೋಪಯೋಗಿ, ಆರೋಗ್ಯ ಇಲಾಖೆಯ ಕಮಿಷನ್ ಫೈಲ್ ಅನ್ನು ಬಿಡುಗಡೆ ಮಾಡುತ್ತೇವೆ. ಪ್ರಮುಖವಾಗಿ ಸಚಿವ ಡಾ.ಕೆ.ಸುಧಾಕರ್ ಅವರ ಇಲಾಖೆಯಲ್ಲೂ ಕಮಿಷನ್ ಇದೆ.ಅಲ್ಲಿ ಬರೋಬ್ಬರಿ 60ರಷ್ಟು ಕಮಿಷನ್ ನಡೆತಿದೆ.
ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ..!
ಮೃತ ಗುತ್ತಿಗೆದಾರ ಕೆಲವು ದಿನಗಳ ಹಿಂದೆ ನನ್ನ ಜತೆ ದೂರವಾಣಿ ಮೂಲಕ ಮಾತನಾಡಿದ್ದರು. ಈಶ್ವರಪ್ಪ ಅವರ ಪುತ್ರನಿಗೆ ಒಂದಷ್ಟು ಹಣ ನೀಡಿದ್ದು, ಇನ್ನೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ವಿಷಯ ತಿಳಿಸಿದ್ದರು.
ಸಂತೋಷ್ ಪಾಟೀಲ ಸಚಿವರ ವಿರುದ್ಧ ಆರೋಪ ಮಾಡಿರುವ ಕುರಿತು ಮಾರ್ಚ್ 11ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದೆ. ಅವರು ಪ್ರತಿಕ್ರಿಯೆಯನ್ನೇ ನೀಡಿರಲಿಲ್ಲ. ಅಲ್ಲದೆ, ಲಂಚಕ್ಕಾಗಿ ಬೇಡಿಕೆ ಇಟ್ಟು, ಹಿಂಸೆ ಕೊಟ್ಟಿರುವುದೇ ಗುತ್ತಿಗೆದಾರನ ಸಾವಿಗೆ ಕಾರಣ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.







