ಸೋನಂ ಕಪೂರ್ ನಿವಾಸದಲ್ಲಿ ಕಳ್ಳತನ ಪ್ರಕರಣ: ನಟಿ ನಿವಾಸದಲ್ಲಿ ಉದ್ಯೋಗದಲ್ಲಿದ್ದ ನರ್ಸ್, ಪತಿ ಬಂಧನ
![ಸೋನಂ ಕಪೂರ್ ನಿವಾಸದಲ್ಲಿ ಕಳ್ಳತನ ಪ್ರಕರಣ: ನಟಿ ನಿವಾಸದಲ್ಲಿ ಉದ್ಯೋಗದಲ್ಲಿದ್ದ ನರ್ಸ್, ಪತಿ ಬಂಧನ ಸೋನಂ ಕಪೂರ್ ನಿವಾಸದಲ್ಲಿ ಕಳ್ಳತನ ಪ್ರಕರಣ: ನಟಿ ನಿವಾಸದಲ್ಲಿ ಉದ್ಯೋಗದಲ್ಲಿದ್ದ ನರ್ಸ್, ಪತಿ ಬಂಧನ](https://www.varthabharati.in/sites/default/files/images/articles/2022/04/13/331574-1649845556.gif)
ಸೋನಂ ಕಪೂರ್ (PTI)
ಹೊಸದಿಲ್ಲಿ: ಬಾಲಿವುಡ್ ನಟಿ ಸೋನಂ ಕಪೂರ್ ಅವರ ದಿಲ್ಲಿ ನಿವಾಸದಲ್ಲಿ ಇತ್ತೀಚೆಗೆ ರೂ. 2.4 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮತ್ತಾಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತಾ ಶೇರ್ಗಿಲ್ ರಸ್ತೆಯಲ್ಲಿರುವ ಸೋನಂ ನಿವಾಸದಲ್ಲಿ ಅವರ ಅತ್ತೆಯನ್ನು ನೋಡಿಕೊಳ್ಳಲೆಂದು ನೇಮಕಗೊಳಿಸಿದ್ದ ನರ್ಸ್ ಅಪರ್ಣಾ ರುತ್ ವಿಲ್ಸನ್ ಆರೋಪಿಯಾಗಿದ್ದಾಳೆ. ಆಕೆಯ ಪತಿ ನರೇಶ್ ಕುಮಾರ್ ಸಾಗರ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾನೆ.
ಕಳ್ಳತನ ಫೆಬ್ರವರಿ 11ರಂದು ನಡೆದಿದ್ದರೆ ಫೆಬ್ರವರಿ 23ರಂದು ತುಘ್ಲಖ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸೋನಂ ಅವರ ಮ್ಯಾನೇಜರ್ ದಾಖಲಿಸಿದ್ದರು.
ಸೋನಂ ಮತ್ತಾಕೆಯ ಪತಿ ಆನಂದ್ ಅಹುಜಾ ಅವರ ವೈಭವೋಪೇತ ನಿವಾಸದಲ್ಲಿ 20 ಮಂದಿ ಉದ್ಯೋಗಿಗಳಿದ್ದು ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಸರಿತಾ ವಿಹಾರ್ ಪ್ರದೇಶವೊಂದರ ನಿವಾಸದ ಮೇಲೆ ದಾಳಿ ನಡೆಸಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ 31 ವರ್ಷ ವಯಸ್ಸಿನವರಾಗಿದ್ದು ಕಳ್ಳತನಗೈದ ಬೆಲೆಬಾಳುವ ವಸ್ತುಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.