ಸಂತೋಷ್ ಪಾಟೀಲ್ ಮೃತ್ಯು ಪ್ರಕರಣ; ಮರಣೋತ್ತರ ಪರೀಕ್ಷೆಗೆ ಮೃತದೇಹ ಬಿಟ್ಟುಕೊಡಲು ಒಪ್ಪದ ಕುಟುಂಬಸ್ಥರು
ಆರೋಪಿಗಳ ಬಂಧನಕ್ಕೆ ಒತ್ತಾಯ
ಉಡುಪಿ : ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಸಂತೋಷ್ ಪಾಟೀಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಕುಟುಂಬಸ್ಥರು ಕಳೆದ 2 ತಾಸುಗಳಿಂದ ಬಿಟ್ಟು ಕೊಡದಿರುವ ಬಗ್ಗೆ ವರದಿಯಾಗಿದೆ.
ಎಫ್ಎಸ್ಎಲ್ ತನಿಖೆ ಪೂರ್ಣಗೊಂಡ ಬಳಿಕ ಲಾಡ್ಜ್ ನಿಂದ ಹೊರಗಡೆ ಬಂದ ಕುಟುಂಬಸ್ಥರು ಆರೋಪಿಗಳನ್ನು ಬಂಧಿಸದೆ ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲ್ಲ ಎಂದು ಹೇಳಿಕೆ ನೀಡಿದ್ದರು.
ಪೋಲಿಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಶವಗಾರಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದರು. ಆದರೆ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡಿಲ್ಲ. ಇದರಿಂದ ಕಳೆದ 2 ಗಂಟೆಗಳಿಂದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.
ಲಾಡ್ಜ್ ಒಳಗಿರುವ ಎಸ್ಪಿ, ಕುಟುಂಬಸ್ಥರನ್ನು ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಮಣಿಪಾಲ ಶವಗಾರಕ್ಕೆ ಕೊಂಡೊಯ್ಯಲು ಈಗಾಗಲೇ ಮೃತದೇಹವನ್ನು ಪ್ಯಾಕ್ ಮಾಡಿ ಆಂಬ್ಯುಲೆನ್ಸ್ ಅನ್ನು ಕೂಡ ಸಜ್ಜುಗೊಳಿಸಿ ಇರಿಸಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.