ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್‍ಗೆ ಖಾಯಂ ಜಾಮೀನು ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್
ತಾತ್ಕಾಲಿಕ ಜಾಮೀನು 3 ತಿಂಗಳು ವಿಸ್ತರಣೆ

ಮುಂಬೈ,ಎ.13: ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದಲ್ಲಿ ಕಾಯಂ ವೈದ್ಯಕೀಯ ಜಾಮೀನು ಕೋರಿ ಕವಿ-ಸಾಮಾಜಿಕ ಹೋರಾಟಗಾರ ವರವರ ರಾವ್(83) ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ. ಆದಾಗ್ಯೂ ಅವರು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ಅದು ಇನ್ನೂ ಮೂರು ತಿಂಗಳು ವಿಸ್ತರಿಸಿದೆ.
ತನ್ನ ಜಾಮೀನು ಅವಧಿಯಲ್ಲಿ ಮುಂಬೈ ಬದಲು ಹೈದರಾಬಾದ್ನಲ್ಲಿ ಉಳಿಯಲು ಅನುಮತಿ ಕೋರಿ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿತು.
ರಾವ್ ಅವರನ್ನು ಇರಿಸಲಾಗಿದ್ದ ನವಿ ಮುಂಬೈನ ತಲೋಜಾ ಜೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಅನೈರ್ಮಲ್ಯ ಸ್ಥಿತಿಯ ಕುರಿತು ರಾವ್ ಪರ ವಕೀಲರ ಹೇಳಿಕೆಗಳಲ್ಲಿ ತಥ್ಯವಿರುವುದನ್ನು ತಾನು ಕಂಡುಕೊಂಡಿದ್ದೇನೆ ಎಂದು ಹೇಳಿದ ನ್ಯಾಯಾಲಯವು,ನಿರ್ದಿಷ್ಟವಾಗಿ ತಲೋಜಾ ಜೈಲಿನಲ್ಲಿಯ ಮತ್ತು ರಾಜ್ಯಾದ್ಯಂತ ಎಲ್ಲ ಜೈಲುಗಳಲ್ಲಿ ಇಂತಹ ಸೌಲಭ್ಯಗಳ ಕುರಿತು ವಾಸ್ತವ ವರದಿಯನ್ನು ಎ.30ರೊಳಗೆ ತನಗೆ ಸಲ್ಲಿಸುವಂತೆ ಮಹಾರಾಷ್ಟ್ರ ಬಂದೀಖಾನೆಗಳ ಮಹಾ ನಿರೀಕ್ಷಕರಿಗೆ ಆದೇಶಿಸಿತು.
ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ದೈನಂದಿನ ಆಧಾರದಲ್ಲಿ ವಿಚಾರಣೆಯನ್ನು ನಡೆಸುವಂತೆ ಉಚ್ಚ ನ್ಯಾಯಾಲಯವು ವಿಶೇಷ ಎನ್ಐಎ ನ್ಯಾಯಾಲಯಕ್ಕೆ ನಿರ್ದೇಶವನ್ನೂ ನೀಡಿತು.
ಕಳೆದ ವರ್ಷದ ಫೆಬ್ರವರಿಯಿಂದ ತಾತ್ಕಾಲಿಕ ವೈದ್ಯಕೀಯ ಜಾಮೀನಿನಲ್ಲಿರುವ ರಾವ್ ಕಾಯಂ ಜಾಮೀನು ಸೇರಿದಂತೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದರು.







