2012ರ ದ್ವೇಷ ಭಾಷಣ ಪ್ರಕರಣ: ಅಕ್ಬರುದ್ದೀನ್ ಉವೈಸಿ ಖುಲಾಸೆ

ಹೈದರಾಬಾದ್ : ಎಐಎಂಐಎಂ ನಾಯಕ ಮತ್ತು ಶಾಸಕ ಅಕ್ಬರುದ್ದೀನ್ ಓವೈಸಿ ಅವರು ಡಿಸೆಂಬರ್ 2012ರಲ್ಲಿ ನೀಡಿದ್ದರೆನ್ನಲಾದ ಎರಡು ದ್ವೇಷ ಭಾಷಣಗಳ ಕುರಿತಾದ ಪ್ರಕರಣಗಳಲ್ಲಿ ಅವರನ್ನು ಬುಧವಾರ ಶಾಸಕರು, ಸಂಸದರುಗಳ ಪ್ರಕರಣಗಳಿಗಾಗಿ ಇರುವ ವಿಶೇಷ ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಓವೈಸಿ ವಿರುದ್ಧ ಪ್ರಾಸಿಕ್ಯೂಶನ್ ಸಾಕಷ್ಟು ಸಾಕ್ಷ್ಯ ಒದಗಿಸಿಲ್ಲ ಎಂದು ಹೇಳಿ ಬೆನಿಫಿಟ್ ಆಫ್ ಡೌಟ್ ಮೇಲೆ ಅವರನ್ನು ಖುಲಾಸೆಗೊಳಿಸಿದೆ.
ಅಕ್ಬುರುದ್ದೀನ್ ಉವೈಸಿ ಅವರು ಡಿಸೆಂಬರ್ 9, 2012ರಂದು ನಿಜಾಮಾಬಾದ್‍ನಲ್ಲಿ ಹಾಗೂ ಡಿಸೆಂಬರ್ 22, 2012ರಂದು ನಿರ್ಮಲ್ ಟೌನ್‍ನಲ್ಲಿ ದ್ವೇಷದ ಭಾಷಣ ನೀಡಿದ್ದರೆಂದು ಆರೋಪಿಸಲಾಗಿತ್ತು, ಅವರನ್ನು ನಂತರ ಬಂಧಿಸಿ ಒಂದು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಚಂದ್ರಾಯನ್‍ಗುಟ್ಟ ಕ್ಷೇತ್ರದ ಶಾಸಕರಾಗಿರುವ ಅವರು ವಿಚಾರಣೆಯ ವೇಳೆ ತಮ್ಮ ವಿರುದ್ಧದ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದರು. ಪ್ರಕರಣ ಸಂಬಂಧ ಚಾರ್ಜ್‍ಶೀಟ್ ಅನ್ನು 2016ರಲ್ಲಿ ಸಲ್ಲಿಸಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಒಟ್ಟು 74 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.
ಪ್ರಕರಣ ಸಂಬಂಧಿಸಿದಂತೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಪೂರಕವಾಗಿ ಪ್ರಾಸಿಕ್ಯೂಶನ್ ಸಾಕ್ಷ್ಯ ಒದಗಿಸಿಲ್ಲ ಎಂದ ಅಕ್ಬರುದ್ದೀನ್ ಉವೈಸಿ ಅವರ ಪರ ವಕೀಲರು ಹೇಳಿದ್ದಾರೆ.





