ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಸಚಿವ ಈಶ್ವರಪ್ಪ ಬಂಧನ, ಸಂಪುಟದಿಂದ ವಜಾಕ್ಕೆ ಒತ್ತಾಯ
ಮುಲ್ಕಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

ಮುಲ್ಕಿ, ಎ.13: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧ 40 ಪರ್ಸೆಂಟ್ ಕಮಿಷನ್ ಆರೋಪ ಎದುರಿಸುತ್ತಿರುವ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಚಿವ ಸಂಪುಟದಿಂದ ವಜಾಗೊಳಿಸ ಬೇಕೆಂದು ಆಗ್ರಹಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಯುವ ನಾಯಕ ಮಿಥುನ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಲ್ಕಿ ತಹಶೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ 40 ಶೇಕಡ ಕಮಿಷನ್ ಪಡೆಯುವ ಭ್ರಷ್ಟ ಮಂತ್ರಿ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು, ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿಯೇ ಕರ್ನಾಟಕ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದ ಜೈನ್, ಈಶ್ವರಪ್ಪ ಭ್ರಷ್ಟರಲ್ಲಿ ಭ್ರಷ್ಟ ರಾಜಕಾರಣಿಯಾಗಿದ್ದು ಅವರನ್ನು ಶ್ರೀಘ್ರ ಬಂಧಿಸಿ ಜೈಲಿಗಟ್ಟುವ ಜೊತೆಗೆ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ರಾಜ್ಯದ ಪೊಲೀಸ್ ಇಲಾಖೆಯೂ ಈ ಸರಕಾರವನ್ನು ನಂಬಬಾರದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪೊಲೀಸ್ ಇಲಾಖೆಗೆ ಕಿವಿಮಾತು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಮಾಧ್ಯಮಗಳು ಮುಖ್ಯಮಂತ್ರಿಯನ್ನು ಒಬ್ಬ ಕ್ಯಾಮರ ಮ್ಯಾನ್ ಎಂದು ಬಿಂಬಿಸುತ್ತಿದೆ. ಮಾಧ್ಯಮದ ಹೇಳಿಕೆಯಂತೆ ಸಿಎಂ ಕ್ಯಾಮರ ಮ್ಯಾನ್ ಆಗಿದ್ದರೆ ಅವರಂತೆಯೇ ಕ್ಯಾಮರ ಮ್ಯಾನ್ ಆಗಿರುವ ಸಂತೋಷ್ ಪಾಟೀಲ್ ಅವರಿಗೆ ನ್ಯಾಯ ಒದಗಿಸಿ ಕೊಡಬೇಕು. ಮುಂದಿನ 24ಗಂಟೆಯೊಳಗೆ ಈಶ್ವರಪ್ಪ ಅವರನ್ನು ಬಂಧಿಸಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಈ ಮೂಲಕ ಸಂತೋಷ್ ಪಾಟೀಲ್ ರಂತಯೇ ಉಳಿದ ಗುತ್ತಿಗೆದಾರರ ಮೇಲೂ ಇಂತಹ ಅಕ್ರಮ ಅನ್ಯಾಯ ನಡೆಯದಂತೆ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಧರ್ಮದ ವಿಷ ಬೀಜ ಬಿತ್ತಿ ಸಂತೋಷ್ ಪಾಟೀಲ್ ಅವರ ಪ್ರಕರಣವನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಯಲಿದೆ ಎಂದು ಭವಿಷ್ಯ ನುಡಿದ ಯುವ ನಾಯಕ ಮಿಥುನ್ ರೈ, ಈ ಸರಕಾರ ಕರ್ನಾಟಕದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಪೊಲೀಸ್ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ. ಇದು ನಿಲ್ಲಬೇಕು ಎಂದು ನುಡಿದರು.
ಪ್ರತಿಭಟನಾ ಸಭೆಯ ಬಳಿಕ ತಹಶೀಲ್ದಾರ್ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೊ, ಕೆಪಿಸಿಸಿ ಕೋ-ಆರ್ಡಿನೇಟರ್ ವಸಂತ್ ಬೇರ್ನಾರ್ಡ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಮಯ್ಯದ್ದಿ ಪಕ್ಷಿಕೆರೆ, ಭೀಮಾ ಕೆ.ಎಸ್. ರಾವ್ ನಗರ, ಬಶೀರ್ ಕೆ. ಎಸ್. ರಾವ್ ನಗರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ʼʼ40 ಪರ್ಸೆಂಟ್ ಕಮಿಷನ್ ಕೇಳಿರುವ ಈಶ್ವರಪ್ಪ ಅವರನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ಬಂಧಿಸಬೇಕು. ಒಂದು ವೇಳೆ ಬಂಧಿಸದಿದ್ದರೆ ಕಾಂಗ್ರೆಸ್ ಜಾಗಟೆ ಭಾರಿಸುತ್ತಾ ತಹಶೀಲ್ದಾರ್ ಕಚೇರಿ ಎದುರು ನಿರಂತರ ಪ್ರತಿಭಟನೆ ಮಾಡಲಿದೆʼʼ.
-ಅಭಯಚಂದ್ರ ಜೈನ್
ಮಾಜಿ ಸಚಿವ