ಎ.15: ಪ್ರಮೋದ್ ಮುತಾಲಿಕ್ಗೆ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ

ಪ್ರಮೋದ್ ಮುತಾಲಿಕ್
ಉಡುಪಿ : ಇದೇ ಎ.15ರ ಶುಕ್ರವಾರ ಗಂಗೊಳ್ಳಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರಿಗೆ ಭಾಗವಹಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 133, 142 ಮತ್ತು 144ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಎ.15ರಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಆಗಮನದ ಪ್ರವೇಶವನ್ನು ಉಡುಪಿ ಜಿಲ್ಲೆಯಾದ್ಯಂತ ನಿರ್ಬಂಧಿಸಿ ಸಿಆರ್ಪಿಸಿ ಸೆಕ್ಷನ್ 133, 143 ಮತ್ತು 144ರನ್ವಯ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದೇನೆ ಎಂದು ಕೂರ್ಮಾರಾವ್ ಇಂದು ಸಂಜೆ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಹಿಂದೂ ಜಾಗರಣಾ ವೇದಿಕೆ ಗಂಗೊಳ್ಳಿ ಗ್ರಾಮದ ವೀರೇಶ್ವರ ದೇವಸ್ಥಾನದಲ್ಲಿ ಎ.15ರಂದು ಸಾಮೂಹಿಕ ಸತ್ಯನಾರಾಯಣ ಪೂಜೆಯ ಅಂಗವಾಗಿ ಸಂಜೆ 5ಗಂಟೆಗೆ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲು ಪ್ರಮೋದ್ ಮುತಾಲಿಕ್ಗೆ ಆಹ್ವಾನ ನೀಡಲಾಗಿತ್ತು.
ಪ್ರಮೋದ್ ಮುತಾಲಿಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚೋದನಾಕಾರಿ ಭಾಷಣ ಮಾಡಿದಲ್ಲಿ ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, 2014ರಲ್ಲಿ ಕೋಮು ಪ್ರೇರಿತ ಘಟನೆ ನಡೆದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿರುವುದರಿಂದ ಪ್ರಮೋದ್ ಮುತಾಲಿಕರ ಎ.15ರ ಆಗಮನವನ್ನು ಜಿಲ್ಲೆಯಾದ್ಯಂತ ನಿರ್ಬಂಧಿಸುವಂತೆ ಪೊಲೀಸ್ ಅಧೀಕ್ಷಕರು ಎ.13ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎ.15ರಂದು ಪ್ರಮೋದ್ ಮುತಾಲಿಕ್ರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.







