ತನಿಖೆಯ ವರದಿಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕಠಿಣ ಕ್ರಮ: ನಳಿನ್ ಕುಮಾರ್ ಕಟೀಲ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ

ಮೈಸೂರು,ಎ.13: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಿಳಿಸಿದರು.
ಮೈಸೂರು ವಿಭಾಗ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಎರಡು ದಿನಗಳಿಂದ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿರುವ ಅವರು ಬುಧವಾರ ಮಾಧ್ಯಮದವರೊಂದಿಗೆ ಮಾನಾಡಿದರು.
'ಗುತ್ತಿಗೆದಾರ ಸಂತೊಷ್ ಆತ್ಮಹತ್ಯೆ ನಮಗೂ ಬೇಸರ ಉಂಟು ಮಾಡಿದೆ. ಈ ಘಟನೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಕೇಳಿ ಬಂದಿದೆ. ಈಗಾಗಲೇ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕರಣದ ತನಿಖೆ ನಂತರ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಹಾಗಾಗಿ ತನಿಖೆ ನಂತರ ಈ ಪ್ರಕರಣದಲ್ಲಿ ಯಾರೂ ಆರೋಪಿಗಳು ಎಂದು ಕಂಡು ಬರುತ್ತದೋ ಅವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.
'ಮಡಿಕೇರಿಯಲ್ಲಿ ಈ ಹಿಂದೆ ನಡೆದಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಬೇರೆ, ಈ ಪ್ರಕರಣ ಬೇರೆ. ಅದರಲ್ಲಿ ಸ್ವತಃ ಡಿವೈಎಸ್ಪಿ ಅವರೇ ವೀಡಿಯೋ ಮಾಡಿ ಕೆಲವರ ಬಗ್ಗೆ ಆರೋಪ ಮಾಡಿದ್ದರು. ಆದರೂ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಪ್ರಕರಣ ನಡೆದ ತಕ್ಷಣ ರಾಜೀನಾಮೆ ನೀಡಲಿಲ್ಲ. ಏಳು ತಿಂಗಳ ನಂತರ ರಾಜೀನಾಮೆ ನೀಡಿದರು. ಹಾಗಾಗಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.







