ಹರಿದ್ವಾರ ದ್ವೇಷ ಭಾಷಣ ಪ್ರಕರಣ: ಎಫ್ಐಆರ್ ಕುರಿತು ಸ್ಥಿತಿಗತಿ ವರದಿ ಸಲ್ಲಿಸಲು ಸರಕಾರಕ್ಕೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ,ಎ.13: ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣಗಳನ್ನು ಮಾಡಲಾಗಿದ್ದ ಹರಿದ್ವಾರದ ಧರ್ಮ ಸಂಸದ್ ಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ಗಳ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಉತ್ತರಾಖಂಡ ಸರಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠವು ಹಿಮಾಚಲ ಪ್ರದೇಶದಲ್ಲಿ ರವಿವಾರ ಆಯೋಜಿಸಲಾಗಿರುವ ಇನ್ನೊಂದು ‘ಧರ್ಮ ಸಂಸದ್ ’ನ ವಿರುದ್ಧ ತಮ್ಮ ಹೊಸ ಅರ್ಜಿಯ ಪ್ರತಿಯನ್ನು ರಾಜ್ಯದ ಪರ ವಕೀಲರಿಗೆ ಸಲ್ಲಿಸಲು ಅರ್ಜಿದಾರರಾದ ದಿಲ್ಲಿ ನಿವಾಸಿ ಪತ್ರಕರ್ತ ಕುರ್ಬಾನ್ ಅಲಿ ಮತ್ತು ಹಿರಿಯ ನ್ಯಾಯವಾದಿ ಅಂಜನಾ ಪ್ರಕಾಶ ಅವರಿಗೆ ಅನುಮತಿಯನ್ನು ನೀಡಿತು. ಪ್ರಸ್ತಾವಿತ ಕಾರ್ಯಕ್ರಮದ ವಿಷಯವನ್ನು ಹಿಮಾಚಲ ಪ್ರದೇಶದಲ್ಲಿನ ಸಂಬಂಧಿತ ಅಧಿಕಾರಿಗಳೊಂದಿಗೆ ಕೈಗೆತ್ತಿಕೊಳ್ಳಲೂ ಪೀಠವು ಅರ್ಜಿದಾರರಿಗೆ ಹಸಿರು ನಿಶಾನೆಯನ್ನು ತೋರಿಸಿತು.
ಹರಿದ್ವಾರ ಮತ್ತು ದಿಲ್ಲಿಯಲ್ಲಿ 2021,ಡಿ.17 ಮತ್ತು 19ರ ನಡುವೆ ನಡೆದಿದ್ದ ಧರ್ಮ ಸಂಸದ್ಗಳಲ್ಲಿ ಮಾಡಲಾಗಿದ್ದ ದ್ವೇಷ ಭಾಷಣಗಳ ವಿರುದ್ಧ ಬಾಕಿಯಿರುವ ಅರ್ಜಿಗೆ ಹೆಚ್ಚುವರಿಯಾಗಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಯುದ್ಧವನ್ನು ಘೋಷಿಸಲು ಯತಿ ನರಸಿಂಹಾನಂದ ಹರಿದ್ವಾರದಲ್ಲಿ ಮತ್ತು ಹಿಂದು ಯುವವಾಹಿನಿ ಎಂಬ ಸ್ವಘೋಷಿತ ಸಂಘಟನೆ ದಿಲ್ಲಿಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ. ಈ ವಿಷಯಗಳ ನಿರ್ವಹಣೆಯಲ್ಲಿ ದಿಲ್ಲಿ ಮತ್ತು ಉತ್ತರಾಖಂಡ ಪೊಲೀಸರು ಅಸಡ್ಡೆಯನ್ನು ಪ್ರದರ್ಶಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಜ.12ರಂದು ನೋಟಿಸನ್ನು ಹೊರಡಿಸಿತ್ತು. ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಅವರು, ಇನ್ನಷ್ಟು ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತಿದೆ ಹಾಗೂ ಮತ್ತೆ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಇದನ್ನು ಗಮನಕ್ಕೆ ತೆಗೆದುಕೊಂಡಿದ್ದ ನ್ಯಾಯಾಲಯವು ತನ್ನ ಜ.12ರ ಆದೇಶದಲ್ಲಿ ಅಹವಾಲನ್ನು ಸಲ್ಲಿಸಲು ಅಥವಾ ಸೂಕ್ತ ಕ್ರಮವನ್ನು ಕೈಗೊಳ್ಳುವಂತಾಗಲು ಅದನ್ನು ಸಂಬಂಧಿತ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲು ಅರ್ಜಿದಾರರಿಗೆ ಸ್ವಾತಂತ್ರವನ್ನು ನೀಡಿತ್ತು.
ದ್ವೇಷಭಾಷಣ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರವು ನಾಲ್ಕು ಎಫ್ಐಆರ್ ಗಳನ್ನು ದಾಖಲಿಸಿದ್ದು, ಈ ಪೈಕಿ ಮೂರರಲ್ಲಿ ಅರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ ಎಂದು ಬುಧವಾರ ವಿಚಾರಣೆ ಸಂದರ್ಭ ಉತ್ತರಾಖಂಡ ಪರ ವಕೀಲರು
ನ್ಯಾಯಾಲಯಕ್ಕೆ ತಿಳಿಸಿದರು. ಸ್ಥಿತಿಗತಿ ವರದಿಯನ್ನು ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ಉತ್ತರಾಖಂಡ ಸರಕಾರವು ಅದಕ್ಕಾಗಿ ಮೂರು ವಾರಗಳ ಕಾಲಾವಕಾಶವನ್ನು ಕೋರಿತು.
ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ ಸಿಬಲ್,ರಾಜ್ಯ ಸರಕಾರಕ್ಕೆ ನೋಟಿಸನ್ನು ಹೊರಡಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು. ‘ರವಿವಾರ ಕಾರ್ಯಕ್ರಮ ನಡೆಯಲಿದೆ ಎನ್ನುವುದು ನಿಜವಾದ ಸಮಸ್ಯೆಯಾಗಿದೆ. ಏನಾಗುತ್ತಿದೆ ಎನ್ನುವುದನ್ನು ನೋಡಿ. ಹಿಂದಿನ ಧರ್ಮ ಸಂಸದ್ಗಳಲ್ಲಿ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳನ್ನು ಓದಲೂ ನಾನು ಬಯಸುವುದಿಲ್ಲ ’ ಎಂದರು.
ಸರ್ವೋಚ್ಚ ನ್ಯಾಯಾಲಯವು ನೋಟಿಸನ್ನು ಹೊರಡಿಸಲಿಲ್ಲವಾದರೂ ಅರ್ಜಿಯ ಪ್ರತಿಯನ್ನು ಹಿಮಾಚಲ ಪ್ರದೇಶದ ಪರ ವಕೀಲರಿಗೆ ಸಲ್ಲಿಸಲು ಸಿಬಲ್ಗೆ ಅವಕಾಶ ನೀಡಿತು.
ನ್ಯಾಯಾಲಯವು ಎ.22ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.







